ADVERTISEMENT

Pakistan Train Attack | ಪಾಕ್‌ ರೈಲು ಮೇಲಿನ ದಾಳಿ: 25 ಶವ ಪತ್ತೆ

ಪಿಟಿಐ
Published 13 ಮಾರ್ಚ್ 2025, 15:36 IST
Last Updated 13 ಮಾರ್ಚ್ 2025, 15:36 IST
ಜಾಫರ್‌ ಎಕ್ಸ್‌ಪ್ರೆಸ್‌ ರೈಲು ಮೇಲಿನ ಪ್ರತ್ಯೇಕತಾವಾದಿಗಳ ಹೊಂಚುದಾಳಿಯಲ್ಲಿ ಕೊಲ್ಲಲ್ಪಟ್ಟ ಪಾಕಿಸ್ತಾನದ ಯೋಧನ ಶವವನ್ನು ಸ್ವಯಂಸೇವಕರು ಗುರುವಾರ ಆಂಬುಲೆನ್ಸ್‌ಗೆ ಸಾಗಿಸಿದರು  – ಎಎಫ್‌ಪಿ ಚಿತ್ರ
ಜಾಫರ್‌ ಎಕ್ಸ್‌ಪ್ರೆಸ್‌ ರೈಲು ಮೇಲಿನ ಪ್ರತ್ಯೇಕತಾವಾದಿಗಳ ಹೊಂಚುದಾಳಿಯಲ್ಲಿ ಕೊಲ್ಲಲ್ಪಟ್ಟ ಪಾಕಿಸ್ತಾನದ ಯೋಧನ ಶವವನ್ನು ಸ್ವಯಂಸೇವಕರು ಗುರುವಾರ ಆಂಬುಲೆನ್ಸ್‌ಗೆ ಸಾಗಿಸಿದರು  – ಎಎಫ್‌ಪಿ ಚಿತ್ರ   

ಮ್ಯಾಕ್‌ (ಪಾಕಿಸ್ತಾನ): ಪಾಕಿಸ್ಥಾನದ ಬಲೂಚಿಸ್ಥಾನ್‌ ಪ್ರಾಂತ್ಯದಲ್ಲಿ ಬಂಡುಕೋರರು ಜಾಫರ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಗುಂಡಿನ ದಾಳಿ ನಡೆಸಿದ್ದರಿಂದ ಹತರಾದ 21 ಒತ್ತೆಯಾಳುಗಳ ಶವಗಳು ಸೇರಿ 25 ಮಂದಿಯ ಶವಗಳು ಘಟನಾ ಸ್ಥಳದಲ್ಲಿ ಪತ್ತೆಯಾಗಿವೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದರು.

ಸ್ಥಳದಿಂದ ಬೆಳಿಗ್ಗೆ 25 ಶವಗಳನ್ನು ಹತ್ತಿರದ ಮ್ಯಾಕ್‌ ಪಟ್ಟಣಕ್ಕೆ ರೈಲಿನಲ್ಲಿ ಸಾಗಿಸಲಾಯಿತು ಎಂದು ಬಲೂಚಿಸ್ತಾನದ ರೈಲ್ವೆ ಅಧಿಕಾರಿಯೊಬ್ಬರು ಹೇಳಿದರು.

ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದಿಂದ ಪೆಶಾವರಕ್ಕೆ ಒಂಬತ್ತು ಬೋಗಿಗಳ ಜಾಫರ್ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿತ್ತು. ಪರ್ವತಗಳಿಂದ ಕೂಡಿದ ಬಲೂಚಿಸ್ತಾನ್‌ನ ಗಡಾಲರ್ ಮತ್ತು ಪೆಹ್ರೊ ಕುನ್ರಿ ಕಣಿವೆ ಪ್ರದೇಶದಲ್ಲಿ ರೈಲು ಹಳಿ ಮೇಲೆ ಪ್ರತ್ಯೇಕತಾವಾದಿ ಗುಂಪು ಬಾಂಬ್ ಸ್ಫೋಟಿಸಿ, ಸುಮಾರು 450 ಪ್ರಯಾಣಿಕರಿದ್ದ ರೈಲಿಗೆ ನುಗ್ಗಿ, ಪ್ರಯಾಣಿಕರನ್ನು ಒತ್ತೆ ಇರಿಸಿಕೊಂಡಿತ್ತು. ಬುಧವಾರ ತಡರಾತ್ರಿ ಕೊನೆಗೊಂಡ ಎರಡು ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ 340ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ADVERTISEMENT

21 ಒತ್ತೆಯಾಳುಗಳು ಮತ್ತು ನಾಲ್ವರು ಯೋಧರನ್ನು ಪ್ರತ್ಯೇಕತಾವಾದಿಗಳು ಕೊಂದಿದ್ದಾರೆ. ಕಾರ್ಯಾಚರಣೆ ವೇಳೆ 33 ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನದ ಸೇನೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ದಾಳಿಯ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಹೊತ್ತುಕೊಂಡಿದೆ.

‘ಮೃತ ಒತ್ತೆಯಾಳುಗಳನ್ನು, ರೈಲಿನಲ್ಲಿದ್ದ 19 ಮಂದಿ ಸೇನಾ ಸಿಬ್ಬಂದಿ, ಒಬ್ಬ ಪೊಲೀಸ್‌ ಅಧಿಕಾರಿ ಹಾಗೂ ಒಬ್ಬ ರೈಲ್ವೆ ಅಧಿಕಾರಿ ಎಂದು ಗುರುತಿಸಲಾಗಿದೆ. ಇನ್ನು ನಾಲ್ವರ ಗುರುತು ಪತ್ತೆಯಾಗಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಸುದ್ದಿಸಂಸ್ತೆಗೆ ತಿಳಿಸಿದ್ದಾರೆ.

‘ಯೋಧರ ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಇದರಲ್ಲಿ ಪ್ರತ್ಯೇಕತಾವಾದಿಗಳು ಒತ್ತೆ ಇರಿಸಿಕೊಂಡಿದ್ದ, ರಜೆ ಮೇಲಿದ್ದ 27 ಯೋಧರು ಸೇರಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇಲೆ ಸೇನಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನು ಸೇನಾ ಕಾರ್ಯಾಚರಣೆಯ ಮೇಲ್ವಿಚಾರಣೆಯಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಪ್ರಧಾನಿ ಮುಹಮ್ಮದ್‌ ಶೆಹಬಾಜ್‌ ಶರೀಫ್‌ ಬಲೂಚಿಸ್ಥಾನ್‌ನ ಪ್ರಾಂತೀಯ ರಾಜಧಾನಿ ಕ್ವೆಟ್ಟಾಕ್ಕೆ ಭೇಟಿ ನೀಡಿ, ಭದ್ರತಾ ಪಡೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಸ್ಥಿತಿ ಅವಲೋಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.