ADVERTISEMENT

ಯೆಮೆನ್‌ ಸೇನಾ ನೆಲೆ ಮೇಲೆ ದಾಳಿ: 30 ಯೋಧರ ಸಾವು

ರಾಯಿಟರ್ಸ್
Published 29 ಆಗಸ್ಟ್ 2021, 12:01 IST
Last Updated 29 ಆಗಸ್ಟ್ 2021, 12:01 IST
.
.   

ಅಡೆನ್‌: ನೈಋತ್ಯ ಯೆಮೆನ್‌ನಲ್ಲಿ ಸೌದಿ ನೇತೃತ್ವದ ಮೈತ್ರಿಪಡೆಗಳ ಸೇನೆ ಮೇಲೆ ಹೌಥಿ ಬಂಡುಕೋರರು ನಡೆಸಿದ ದಾಳಿಯಲ್ಲಿ ಕನಿಷ್ಠ 30 ಯೋಧರು ಸಾವಿಗೀಡಾಗಿದ್ದಾರೆ.

ಡ್ರೋನ್‌ಗಳು ಮತ್ತು ಖಂಡಾಂತರ ಕ್ಷಿಪಣಿಗಳ ಮೂಲಕ ಅಲ್‌–ಅನಾದ್‌ ಪ್ರದೇಶದಲ್ಲಿ ಈ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಯೆಮಿನಿ ಪಡೆಗಳ ವಕ್ತಾರ ಮೊಹಮ್ಮದ್‌ ಅಲ್‌–ನಖೀಬ್‌ ತಿಳಿಸಿದ್ದಾರೆ.

ಸೌದಿ ನೇತೃತ್ವದ ಮೈತ್ರಿ ಪಡೆಗಳು ಮತ್ತು ಹೌಥಿಗಳ ನಡುವಣ ಮಾತುಕತೆ ವಿಫಲವಾದ ಬೆನ್ನಲ್ಲೇ ಈ ದಾಳಿ ನಡೆದಿದೆ. ಈ ಮಾತುಕತೆಗೆ ವಿಶ್ವಸಂಸ್ಥೆ ಮತ್ತು ಅಮೆರಿಕ ಬೆಂಬಲ ಸೂಚಿಸಿದ್ದವು.

ADVERTISEMENT

2014ರಲ್ಲಿ ಹೌಥಿ ಬಂಡುಕೋರರು ಯೆಮೆನ್‌ನ ಸನ್ನಾ ನಗರದ ಮೇಲೆ ದಾಳಿ ನಡೆಸಿ ಅಬ್ದ–ರಬ್ಬು ಮಾನ್ಸೌರ್‌ ಹದಿ ಅವರ ಸರ್ಕಾರವನ್ನು ಉರುಳಿಸಿದ್ದರು. ನಂತರ, ಸೌದಿ ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನೇತೃತ್ವದ ಮೈತ್ರಿಪಡೆಗಳು 2015ರ ಮಾರ್ಚ್‌ನಲ್ಲಿ ಮಧ್ಯಪ್ರವೇಶಿಸಿ, ಹದಿ ಅವರಿಗೆ ಮತ್ತೆ ಅಧಿಕಾರ ದೊರಕಿಸಿಕೊಟ್ಟಿದ್ದವು. ಆದರೆ, ಬಂಡುಕೋರರ ಜತೆ ಸಂಘರ್ಷ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.