ಆಲಿಪ್ತ ಚಳವಳಿಯ 19ನೇ ಮಧ್ಯಾವಧಿ ಸಚಿವರ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಕೀರ್ತಿ ವರ್ಧನ್ ಸಿಂಗ್ ಭಾಗವಹಿಸಿದರು
ಪಿಟಿಐ ಚಿತ್ರ
ಕಂಪಾಲ (ಉಗಾಂಡ): ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುವಂತೆ ಅಲಿಪ್ತ ಚಳವಳಿ (ಎನ್‌ಎಎಂ) ಸದಸ್ಯ ರಾಷ್ಟ್ರಗಳಿಗೆ ಭಾರತ ಗುರುವಾರ ಕರೆ ನೀಡಿದೆ. ಭಯೋತ್ಪಾದನೆಗೆ ಪ್ರಾಯೋಜಕತ್ವ, ಬೆಂಬಲ, ಸಮರ್ಥನೆ ನೀಡಿದವರಿಗೇ ಅದು ಕೊನೆಗೆ ‘ಕಚ್ಚಲು ಬರುತ್ತದೆ’ ಎಂದು ಭಾರತ ಎಚ್ಚರಿಸಿದೆ.
ಇಲ್ಲಿ ನಡೆದ ಎನ್‌ಎಎಂನ 19ನೇ ಮಧ್ಯಾವಧಿ ಸಚಿವರ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಕೀರ್ತಿವರ್ಧನ್ ಸಿಂಗ್, ಭಯೋತ್ಪಾದನೆ ಒಂದು ಸಾಮಾಜಿಕ ಬೆದರಿಕೆಯಾಗಿದ್ದು, ಅದನ್ನು ಅಂತರರಾಷ್ಟ್ರೀಯ ಸಹಕಾರದಿಂದ ಕೊನೆಗೊಳಿಸಬಹುದು ಎಂದು ಹೇಳಿದರು.
‘ಭಾರತವು ದಶಕಗಳಿಂದ ಗಡಿಯಾಚೆಗಿನ ಭೀಕರ ಭಯೋತ್ಪಾದಕ ದಾಳಿಗಳಿಗೆ ಬಲಿಯಾಗಿದೆ. ಏಪ್ರಿಲ್ 22ರಂದು ಕೂಡ ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಲಾಯಿತು. ಈ ಚಳವಳಿಯ ಪ್ರತಿ ಸದಸ್ಯರಿಗೂ ಭಯೋತ್ಪಾದನೆಯ ಸಮಸ್ಯೆಯ ಬಗ್ಗೆ ಅರಿವಿದ್ದು, ಅದನ್ನು ಎದುರಿಸಲು ಬದ್ಧವಾಗಿದೆ’ ಎಂದು ಅವರು ತಿಳಿಸಿದರು.
‘ಆದಾಗ್ಯೂ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಚರ್ಚಿಸಿದಾಗ ಸದಸ್ಯ ರಾಷ್ಟ್ರವೊಂದು ಅಪರಾಧಿಯನ್ನು ಸಮರ್ಥನೆ ಮಾಡಿಕೊಂಡಿದ್ದು ತೀವ್ರ ವಿಷಾದದ ಸಂಗತಿಯಾಗಿದೆ. ದುರದೃಷ್ಟವಶಾತ್, ಆ ದೇಶವನ್ನು ಸಮರ್ಥಿಸುವ ಮತ್ತೊಂದು ಸದಸ್ಯ ರಾಷ್ಟ್ರವೂ ಇದೆ’ ಎಂದು ಕೀರ್ತಿವರ್ಧನ್ ಸಿಂಗ್ ಪರೋಕ್ಷವಾಗಿ ಪಾಕಿಸ್ತಾನ ಮತ್ತು ಚೀನಾವನ್ನು ಉಲ್ಲೇಖಸುತ್ತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.