ADVERTISEMENT

ವಿಶ್ವಸಂಸ್ಥೆಯಲ್ಲಿ ಜಮ್ಮು ಕಾಶ್ಮೀರ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ ಪಾಕಿಸ್ತಾನ

ಪಿಟಿಐ
Published 18 ಜುಲೈ 2020, 6:06 IST
Last Updated 18 ಜುಲೈ 2020, 6:06 IST
ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌
ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌    

ವಿಶ್ವಸಂಸ್ಥೆ: ಇನ್ನಷ್ಟು ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ನೀಡುವುದನ್ನು ವಿರೋಧಿಸಿರುವ ಪಾಕಿಸ್ತಾನವು, ವಿಶ್ವಸಂಸ್ಥೆಯ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಪುನಃ ಪ್ರಸ್ತಾಪಿಸಿದೆ.

‘ಕೋವಿಡ್‌–19 ನಂತರ ಬಹುಪಕ್ಷೀಯತೆ– 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮಗೆಂಥ ವಿಶ್ವಸಂಸ್ಥೆ ಬೇಕು’ ಎಂಬ ವಿಚಾರವನ್ನು ಕುರಿತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್‌ ಖುರೇಷಿ, ‘ಬಲಾತ್ಕಾರ, ಶಕ್ತಿಯ ಅನಿಯಂತ್ರಿತ ಬಳಕೆಯ ಮೂಲಕ ವಿಶ್ವಸಂಸ್ಥೆ ಹಾಗೂ ಬಹುಪಕ್ಷೀಯತೆಯ ಪರಿಕಲ್ಪನೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ಪಾಕಿಸ್ತಾನವು ವಿಶೇಷವಾಗಿ ಜಮ್ಮು ಕಾಶ್ಮೀರದ ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ದೌರ್ಜನ್ಯದ ಬಗ್ಗೆ ಚಿಂತಿತವಾಗಿದೆ’ ಎಂದರು.

‘ಅಧಿಕಾರ ಮತ್ತು ಸವಲತ್ತುಗಳ ಸಂಕುಚಿತ ಮಹತ್ವಾಕಾಂಕ್ಷೆ ಹೊಂದಿರುವ ರಾಷ್ಟ್ರಗಳಿಗೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ನೀಡುವುದು ಸರಿಯಲ್ಲ. ಇದರಿಂದ ಭದ್ರತಾ ಮಂಡಳಿಗೇ ಅಪಾಯವಿದೆ’ ಎಂದು ಖುರೇಷಿ ಹೇಳಿದರು.

ADVERTISEMENT

ಪಾಕಿಸ್ತಾನದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತವು, ‘ಜಮ್ಮು ಕಾಶ್ಮೀರ ನಮ್ಮ ಆಂತರಿಕ ವಿಚಾರ. ಈ ರಾಜ್ಯವು ಭಾರತ ಅವಿಭಾಜ್ಯ ಅಂಗವಾಗಿತ್ತು, ಈಗಲೂ ಆಗಿದೆ, ಮುಂದೆಯೂ ಹಾಗೆ ಉಳಿಯಲಿದೆ’ ಎಂದು ಸ್ಪಷ್ಟಪಡಿಸಿತು.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಪರಿಷ್ಕರಣೆಯು ಹಲವು ವರ್ಷಗಳಿಂದ ಬಾಕಿ ಉಳಿದಿದೆ. ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನ ನಡೆಸುತ್ತಿದೆ. ವಿಶ್ವಸಂಸ್ಥೆಯ ಈ ಉನ್ನತ ಮಟ್ಟದ ಸಮಿತಿಯಲ್ಲಿ ಭಾರತಕ್ಕೆ ಸ್ಥಾನ ಲಭಿಸಬೇಕು ಎಂದು ಭಾರತ ವಾದಿಸುತ್ತಾ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ‘ವಿಶ್ವಸಂಸ್ಥೆಗೆ ಹೊಸ ರೂಪನೀಡಬೇಕಾದ ಅಗತ್ಯವನ್ನು ಕೋವಿಡ್‌–19 ಪಿಡುಗು ಎತ್ತಿ ತೋರಿಸಿದೆ. ಮಾನವ ಕೇಂದ್ರಿತ ಜಾಗತೀಕರಣದ ಆಧಾರದಲ್ಲಿ, ಬಹುಪಕ್ಷೀಯ ವ್ಯವಸ್ಥೆಯನ್ನು ಸುಧಾರಿಸಲು ಎಲ್ಲಾ ರಾಷ್ಟ್ರಗಳು ಪ್ರತಿಜ್ಞೆ ಮಾಡಬೇಕಾಗಿದೆ. ಸುಧಾರಿತ ಬಹುಪಕ್ಷೀಯ ವ್ಯವಸ್ಥೆಯನ್ನೊಳಗೊಂಡ, ಹೊಸರೂಪದ ವಿಶ್ವ ಸಂಸ್ಥೆಯು ಮಾತ್ರ ಜಗತ್ತಿನ ನಿರೀಕ್ಷೆಗಳನ್ನು ಈಡೇರಿಸಬಲ್ಲದು’ ಎಂದರು.

ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಆಂತರಿಕ ವಿಚಾರಗಳನ್ನು ವಿಶ್ವ ಸಂಸ್ಥೆಯ ಎಲ್ಲಾ ವೇದಿಕೆಗಳಲ್ಲೂ ಪ್ರಸ್ತಾಪಿಸುವ ಮೂಲಕ ಪಾಕಿಸ್ತಾನವು ಭಾರತದ ವಿರುದ್ಧ ಅಭಿಪ್ರಾಯ ಕ್ರೋಡೀಕರಿಸುವ ಪ್ರಯತ್ನ ಮಾಡುತ್ತಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ವಿಚಾರವನ್ನು ವಿಶೇಷವಾಗಿ ಅದು ಪ್ರಸ್ತಾಪಿಸುತ್ತಾ ಬಂದಿದೆ. ಆದರೆ ಇದು ತನ್ನ ಆಂತರಿಕ ವಿಚಾರ ಎಂಬುದನ್ನು ಭಾರತ ಅಷ್ಟೇ ಪ್ರಬಲವಾಗಿ ಎಲ್ಲಾ ವೇದಿಕೆಗಳಲ್ಲಿ ಪ್ರತಿಪಾದಿಸುತ್ತಾ ಬಂದಿದೆ. ಜತೆಗೆ ವಾಸ್ತವವನ್ನು ಒಪ್ಪಿಕೊಂಡು, ಭಾರತವಿರೋಧಿ ಪ್ರಚಾರವನ್ನು ಸ್ಥಗಿತಗೊಳಿಸುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡುತ್ತಾ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.