
ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಹಲವು ವಿಮಾನಗಳ ಸಂಚಾರ ರದ್ದುಗೊಂಡಿದ್ದು ಲೆಬನಾನ್‌ನ ಬೈರೂತ್ ನಗರದ ರಫೀಕ್ ಹರಿರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾದುಕೂತ ಪ್ರಯಾಣಿಕರು.
ಪಿಟಿಐ
ಟೆಹರಾನ್: ದಕ್ಷಿಣ ಇರಾನ್‌ನ ಹೊರ್ಮ್‌ಜ್‌ಗನ್ ಪ್ರಾಂತ್ಯದ ಮಿನಾಬ್ ಪಟ್ಟಣದಲ್ಲಿರುವ ಪ್ರಾಥಮಿಕ ಶಾಲೆಯನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ನಡೆಸಿದ ಸೇನಾ ದಾಳಿಯಲ್ಲಿ ಮಕ್ಕಳು ಸೇರಿದಂತೆ 85 ಮಂದಿ ಮೃತಪಟ್ಟಿದ್ದಾರೆ.
ವಿದ್ಯಾರ್ಥಿನಿಯರ ಶಾಲೆಯ ಮೇಲೆ ಈ ದಾಳಿ ನಡೆದಿದೆ. ಮೃತಪಟ್ಟವರಲ್ಲಿ ಮಕ್ಕಳೇ ಹೆಚ್ಚಿದ್ದಾರೆ ಎಂದು ಅಲ್ ಜಜೀರಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಶಾಲೆಯ ಮೇಲೆ ಮೂರು ಕ್ಷಿಪಣಿ ದಾಳಿ ನಡೆದಿದ್ದು, ಅವಶೇಷಗಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ 63ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇರಾನ್ ಮೇಲೆ ದಾಳಿ ನಡೆಸುವುದಕ್ಕಾಗಿ ವಿವಿಧ ದೇಶಗಳಲ್ಲಿನ ತನ್ನ ಸೇನಾ ನೆಲೆಗಳನ್ನು ಅಮೆರಿಕ ಹಾಗೂ ಇಸ್ರೇಲ್ ಬಳಸಿಕೊಂಡಿವೆ. ಈ ಎಲ್ಲ ಸ್ಥಳಗಳು ನಮ್ಮ ಸಶಸ್ತ್ರ ಪಡೆಗಳ ಗುರಿಗಳಾಗಿವೆ.– ಅಬ್ಬಾಸ್ ಅರಾಘ್ಚಿ, ಇರಾನ್ ವಿದೇಶಾಂಗ ಸಚಿವ
ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಇರಾನ್‌ನ ಸೇನಾ ಮುಖ್ಯಸ್ಥ ಜನರಲ್ ಅಮೀರ್ ಹತಾಮಿ ಕೂಡ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ನ ಮಾಧ್ಯಮಗಳು ವರದಿ ಮಾಡಿವೆ. ಇದನ್ನು ಇರಾನ್‌ನ ಮಾಧ್ಯಮಗಳು ಖಚಿತಪಡಿಸಿಲ್ಲ.
‘ಇರಾನ್ ದಾಳಿಗೆ ಬ್ರಿಟನ್ ಯುದ್ಧ ವಿಮಾನಗಳ ಬಳಕೆ’
‘ಇರಾನ್ ಮೇಲೆ ಶನಿವಾರ ಅಮೆರಿಕ ಹಾಗೂ ಇಸ್ರೇಲ್ ಸೇನೆಯು ಜಂಟಿಯಾಗಿ ನಡೆಸಿದ ಸೇನಾ ದಾಳಿಯಲ್ಲಿ ಬ್ರಿಟನ್‌ನ ಯುದ್ಧ ವಿಮಾನಗಳು ಭಾಗಿಯಾಗಿದ್ದವು’ ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ತಿಳಿಸಿದ್ದಾರೆ.
‘ದೇಶದ ಜನರ ರಕ್ಷಣೆಯ ಜೊತೆಗೆ ಮಿತ್ರಪಡೆಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸಂಘಟಿತ ಪ್ರಾದೇಶಿಕ ರಕ್ಷಣಾ ಕಾರ್ಯಾಚರಣಾ ಭಾಗವಾಗಿ ಆಕಾಶದಲ್ಲಿ ನಾವು ಕೂಡ ಕೈ ಜೋಡಿಸಿದ್ದೆವು’ ಎಂದು ಅವರು ವಿವರಿಸಿದ್ದಾರೆ.
ದಾಳಿ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಯೇ ಈ ದಾಳಿ ನಡೆಸಲಾಗಿದೆ’ ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಪರಿಸ್ಥಿತಿ ಉಲ್ಬಣಗೊಂಡ ಬೆನ್ನಲ್ಲೇ ಹಿರಿಯ ಸಚಿವರ ಸಭೆ ನಡೆಸಿ ಪರಿಸ್ಥಿತಿ ಪರಾಮರ್ಶೆ ನಡೆಸಿದರು.
ಕೆನಡಾ ಬೆಂಬಲ: ಇರಾನ್ ಮೇಲೆ ಅಮೆರಿಕ ನಡೆಸಿರುವ ಸೇನಾ ದಾಳಿಗೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಟೆಹರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಹಾಗೂ ಉಗ್ರಗಾಮಿ ಗುಂಪುಗಳಿಗೆ ಬೆಂಬಲ ನಿಲ್ಲಿಸಲು ವಿಫಲವಾಗಿತ್ತು ಎಂದು ಆರೋಪಿಸಿದ್ದಾರೆ.
‘ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ತಪ್ಪಿಸಲು ಅಲ್ಲಿನ ಆಡಳಿತವು ಅಂತರರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಧಕ್ಕೆ ಉಂಟಾಗುವುದನ್ನು ತಡೆಯಲು ಅಮೆರಿಕ ಸೇನಾ ದಾಳಿಯನ್ನು ಕೆನಡಾ ಕೂಡ ಬೆಂಬಲಿಸುತ್ತದೆ’ ಎಂದು ಅವರು ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಅವರು ಮುಂಬೈನಲ್ಲಿದ್ದಾರೆ.
ಮಾತುಕತೆಗೆ ರಷ್ಯಾ ಆಗ್ರಹ
ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿರುವುದನ್ನು ರಷ್ಯಾ ಖಂಡಿಸಿದೆ. ‘ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿ ಸಾರ್ವಭೌಮ ರಾಷ್ಟ್ರದ ವಿರುದ್ಧ ಅಪ್ರಚೋದಿತ ಆಕ್ರಮಣಶೀಲತೆಯು ಖಂಡನೀಯವಾಗಿದ್ದು ಕೂಡಲೇ ರಾಜತಾಂತ್ರಿಕ ಮಾತುಕತೆಗೆ ಮುಂದಾಗಬೇಕು’ ಎಂದು ಆಗ್ರಹಿಸಿದೆ.
ವಿಶ್ವಸಂಸ್ಥೆಯ ಸ್ವತಂತ್ರ ದೇಶವಾಗಿರುವ ಇರಾನ್ ಮೇಲೆ ಎರಡು ರಾಷ್ಟ್ರಗಳು ಪೂರ್ವಯೋಜಿತವಾಗಿ ದಾಳಿ ನಡೆಸಿವೆ ಎಂದು ರಷ್ಯಾ ವಿದೇಶಾಂಗ ಇಲಾಖೆಯು ಬಣ್ಣಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.