ADVERTISEMENT

ತಾಜ್ಯ ಸಂಸ್ಕರಣೆ, ಮರುಬಳಕೆ ಹೆಚ್ಚಿಸಲು ಆಸ್ಟ್ರೇಲಿಯಾ ನಿರ್ಧಾರ

ಸಂಸತ್ತಿನಲ್ಲಿ ತ್ಯಾಜ್ಯ ರಫ್ತು ನಿಷೇಧ ಮಸೂದೆ ಮಂಡಿಸಿದ ಪ್ರಧಾನಿ ಮಾರಿಸನ್‌

ಏಜೆನ್ಸೀಸ್
Published 27 ಆಗಸ್ಟ್ 2020, 11:22 IST
Last Updated 27 ಆಗಸ್ಟ್ 2020, 11:22 IST
ಸ್ಕಾಟ್ ಮಾರಿಸನ್
ಸ್ಕಾಟ್ ಮಾರಿಸನ್   

ಕ್ಯಾನ್‌ಬೆರಾ: ದೇಶದಲ್ಲಿ ಉತ್ಪತ್ತಿಯಾಗುವ ತಾಜ್ಯವನ್ನು ಸಂಸ್ಕರಿಸಿ, ಮರುಬಳಕೆ ಮಾಡಲು ನಿರ್ಧರಿಸಿರುವ ಆಸ್ಟ್ರೇಲಿಯಾ ಸರ್ಕಾರ, ಈ ಸಂಬಂಧ ಸಂಸತ್ತಿನಲ್ಲಿ ಗುರುವಾರ ’ತ್ಯಾಜ್ಯ ವಸ್ತುಗಳ ರಫ್ತು ನಿಷೇಧ ಮಸೂದೆಯನ್ನೂ’ ಮಂಡಿಸಿದೆ.

ಸಂಸತ್ತಿನಲ್ಲಿ ಈ ಮಸೂದೆ ಮಂಡಿಸಿ ಮಾತನಾಡಿದ ಪ್ರಧಾನಿ ಸ್ಕಾಟ್‌ ಮಾರಿಸನ್‌, ’ನಮ್ಮ ತ್ಯಾಜ್ಯ ನಮ್ಮ ಜವಾಬ್ದಾರಿ. ನಾವು ಅದನ್ನು ಸಂಸ್ಕರಿಸಿ ಮರುಬಳಕೆ ಮಾಡಬೇಕು. ಈ ಪ್ರಕ್ರಿಯೆಯ ಗುಣಮಟ್ಟವನ್ನೂ ಹೆಚ್ಚಿಸಬೇಕು’ ಎಂದು ಪ್ರತಿಪಾದಿಸಿದರು.

ಆಸ್ಟ್ರೇಲಿಯಾದಿಂದ ವಾರ್ಷಿಕ ಸುಮಾರು 6.45 ಲಕ್ಷ ಮೆಟ್ರಿಕ್‌ ಟನ್‌ ಸಂಸ್ಕರಿಸಿದ ತ್ಯಾಜ್ಯವನ್ನು ಏಷ್ಯಾ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದ್ದು, ಅದನ್ನು ತಪ್ಪಿಸುವುದು ಈ ಮಸೂದೆಯ ಉದ್ದೇಶವಾಗಿದೆ.ಹಾಗಾಗಿ ಮುಂದಿನ ವರ್ಷದಿಂದ ಇಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್‌, ಪೇಪರ್, ಗ್ಲಾಸ್ ಸೇರಿದಂತೆ ಯಾವುದೇ ತ್ಯಾಜವನ್ನು ರಫ್ತು ಮಾಡದಂತೆ ಈ ಮಸೂದೆ ತಡೆಯಲಿದೆ’ಎಂದು ವಿವರಿಸಿದರು.

ADVERTISEMENT

’ತ್ಯಾಜ್ಯವನ್ನು ಸಂಸ್ಕರಿಸಿ ಮರುಬಳಕೆ ಮಾಡುವ ಮೂಲಕ ಉದ್ಯೋಗ ಸೃಷ್ಟಿಸಬೇಕು ಮತ್ತು ಇದರಿಂದ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಬೇಕು’ ಎಂದು ಹೇಳಿದರು.

’ಪ್ರಸ್ತುತ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಸಾಗರದಲ್ಲಿರುವ ಜಲಚರಗಳು ಸಂಕಷ್ಟ ಎದುರಿಸುತ್ತಿವೆ. ಇದು ನಮ್ಮ ಸಮುದಾಯಗಳನ್ನು ನಾಶಪಡಿಸುವ ಜತೆಗೆ, ಜೀವನೋಪಾಯಕ್ಕೂ ಕುತ್ತು ತುರುತ್ತಿದೆ. ಜನರ ಆರೋಗ್ಯವನ್ನು ಹಾಳುಗೆಡವುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ ಮಾರಿಸನ್, ’ನಮ್ಮ ಸರ್ಕಾರ, ಈ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ವಿಚಾರವನ್ನು ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಪ್ರಧಾನ ವಿಷಯವಾಗಿ ಚರ್ಚಿಸುತ್ತಿದೆ. ಮಾತ್ರವಲ್ಲ,ಏಷ್ಯಾ ಶೃಂಗಸಭೆ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಅಸೋಸಿಯೇಷನ್‌ಗಳ ಜತೆಗೂ ಚರ್ಚೆಗೆ ತರಲಿದೆ’ ಎಂದು ಸ್ಪಷ್ಟಪಡಿಸಿದರು.‌

ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದ ಸಂಸ್ಕರಿತ ತ್ಯಾಜ್ಯವನ್ನು ಆಮದು ಮಾಡಿಕೊಳ್ಳುತ್ತಿದ್ದ ರಾಷ್ಟ್ರ ಚೀನಾ. ಈ ರಾಷ್ಟ್ರ 2017ರಿಂದ ತ್ಯಾಜ್ಯ ಆಮದಿನ ಮೇಲೆ ನಿಷೇಧ ಹೇರುತ್ತಿದ್ದಂತೆ, ಜಾಗತಿಕಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಒಂದು ಬಹುದೊಡ್ಡ ಸಮಸ್ಯೆಯಾಗಿ ತಲೆದೋರಿತು.

ಈ ಬೆಳವಣಿಗೆಗಳ ನಂತರ ಆಸ್ಟ್ರೇಲಿಯಾದ ಶಾಸನ ಸಭೆಯಲ್ಲಿ ತ್ಯಾಜ್ಯ ಸಂಸ್ಕರಣೆಗಾಗಿ ರಾಷ್ಟ್ರಮಟ್ಟದಲ್ಲಿ ಒಂದು ಕೈಗಾರಿಕಾ ನಿಯಮಗಳನ್ನು ರೂಪಿಸಿದ್ದಲ್ಲದೇ, ಅದನ್ನು ಜಾರಿಗೋಳಿಸಲು 138 ಅಮೆರಿಕನ್ ಡಾಲರ್ ಮೊತ್ತದಆಧುನೀಕರಣ ಮರುಬಳಕೆ ನಿಧಿಯನ್ನು ಸ್ಥಾಪಿಸಲು ಮುಂದಾಗಿದೆ.

ಆಸ್ಟ್ರೇಲಿಯಾ ಸರ್ಕಾರ ತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆ ಕ್ಷೇತ್ರದಲ್ಲಿ 10 ಸಾವಿರ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಯೋಜನೆ ರೂಪಿಸಿದೆ. ಪ್ರಸ್ತುತ ಈ ಕ್ಷೇತ್ರದಲ್ಲಿರುವ ಸಿಬ್ಬಂದಿಯ ಪ್ರಮಾಣವನ್ನು ಶೇಕಡ 32ರಷ್ಟು ಏರಿಸಲು ಯೋಜನೆ ರೂಪಿಸಿದೆ.

ಸಂಸ್ಕರಿತ ತ್ಯಾಜ್ಯದಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪರಿಸರ ರಕ್ಷಣೆಗೆ ಹೆಗಲು ನೀಡುವ ಗ್ರಾಹಕರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಸರ್ಕಾರ ಘೋಷಿಸಲು ತೀರ್ಮಾನಿಸಿದೆ. ಈ ಮೂಲಕ ರಾಷ್ಟ್ರಮಟ್ಟದ ಪರಿಸರದ ವಿಷಯನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ, ತ್ಯಾಜ್ಯವನ್ನು ಲ್ಯಾಂಡ್‌ಫಿಲ್‌ಗಳಲ್ಲಿ ಹೂಳುವುದು ಹಾಗೂ ಕಡಲಿನ ದಡದಲ್ಲಿ ಸುರಿಯುವದನ್ನು ತಪ್ಪಿಸುವ ಕ್ರಮವಾಗಿದೆ’ ಎಂದು ಪರಿಸರ ಸಚಿವ ಸುಸಾನ್ ಲೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.