ADVERTISEMENT

ಅಣಬೆ ತಿನ್ನಿಸಿ ಕೊಲೆ: ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಆಸ್ಟ್ರೇಲಿಯಾ ಕೋರ್ಟ್

ಏಜೆನ್ಸೀಸ್
Published 8 ಸೆಪ್ಟೆಂಬರ್ 2025, 4:08 IST
Last Updated 8 ಸೆಪ್ಟೆಂಬರ್ 2025, 4:08 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ಸಿಡ್ನಿ: ತನ್ನ ಪತಿಯ ಮೂವರು ಸಂಬಂಧಿಕರನ್ನು ಕೊಲೆ ಮಾಡಿದ ಆರೋಪ ಪ್ರಕರಣದಲ್ಲಿ ದೋಷಿಯಾಗಿರುವ ಎರಿಕ್‌ ಪ್ಯಾಟರ್ಸನ್‌ ಎಂಬ ಮಹಿಳೆಗೆ ಆಸ್ಟ್ರೇಲಿಯಾ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ವಿಕ್ಟೋರಿಯನ್ ಸುಪ್ರೀಂ ಕೋರ್ಟ್ ನ್ಯಾ. ಕ್ರಿಸ್ಟೋಫರ್‌ ಬೀಲೆ ಅವರು, ಎರಿಕ್‌ ಮಾಡಿರುವ ಅಪರಾಧವು ವಿಶ್ವಾಸಘಾತವೂ ಹೌದು ಎಂದಿದ್ದಾರೆ.

ದೋಷಿ ಎರಿಕ್‌, ತಮ್ಮಿಂದ ದೂರವಾಗಿದ್ದ ಪತಿ ಸೈಮನ್‌ ಪ್ಯಾಟರ್ಸನ್‌ ಅವರನ್ನು ಕೊಲ್ಲಲು ಸಂಚು ಮಾಡಿದ್ದಳು. ಅದರಂತೆ, 2023ರ ಜುಲೈನಲ್ಲಿ ಸೈಮನ್, ಅವರ ಅಮ್ಮ–ಅಪ್ಪ, ಚಿಕ್ಕಮ್ಮ–ಚಿಕ್ಕಪ್ಪನನ್ನು ಊಟಕ್ಕೆ ಆಹ್ವಾನಿಸಿದ್ದಳು.

ADVERTISEMENT

ಮನೆಗೆ ಕರೆಯುವ ವೇಳೆ, ತನಗೆ ಕ್ಯಾನ್ಸರ್‌ ಇದೆ. ಆ ವಿಚಾರವನ್ನು ತನ್ನ ಇಬ್ಬರು ಮಕ್ಕಳಿಗೆ ತಿಳಿಸುವುದು ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ. ಅದಕ್ಕೆ ನಿಮ್ಮ ಸಲಹೆ ಬೇಕಿದೆ ಎಂದು ಹೇಳಿ ನಂಬಿಸಿದ್ದಳು ಎನ್ನಲಾಗಿದೆ. ಸೈಮನ್‌ ಹೊರತುಪಡಿಸಿ ಉಳಿದವರು ಮನೆಗೆ ಊಟಕ್ಕೆ ಹೋಗಿದ್ದರು.

ಮೊದಲೇ ಮಾಡಿಕೊಂಡಿದ್ದ ಯೋಜನೆಯಂತೆ ವಿಷಪೂರಿತ ಅಣಬೆ ಸೇರಿಸಿ ತಯಾರಿಸಿದ್ದ ಗೋಮಾಂಸದ ಆಹಾರವನ್ನು ಅವರಿಗೆ ಬಡಿಸಿದ್ದಳು. ಆ ವೇಳೆ, ಗೇಲ್‌ ಪ್ಯಾಟರ್ಸನ್‌, ಡಾನ್‌ ಪ್ಯಾಟರ್ಸನ್‌ ಮತ್ತು ಗೇಲ್‌ ಸಹೋದರಿ ಹೀದರ್‌ ವಿಲ್ಕಿನ್ಸನ್‌ ಅವರು ಮೃತಪಟ್ಟಿದ್ದರು. ಆದರೆ, ಹೀದರ್‌ ಪತಿ ಇಯಾನ್‌ ವಿಲ್ಕಿನ್ಸನ್‌ ಬದುಕುಳಿದಿದ್ದರು. ಈ ಪ್ರಕರಣದಲ್ಲಿ ಎರಿಕ್‌ ದೋಷಿ ಎಂದು ಜುಲೈನಲ್ಲಿ ಘೋಷಿಸಲಾಗಿತ್ತು.

'ಮೂವರನ್ನು ಕೊಂದಿರುವುದಷ್ಟೇ ಅಲ್ಲ. ಇಯಾನ್‌ ವಿಲ್ಕಿನ್ಸನ್‌ ಅವರ ಆರೋಗ್ಯಕ್ಕೆ ಶಾಶ್ವತ ಹಾನಿ ಮಾಡಿದ್ದೀರಿ. ಅಲ್ಲದೆ, ಪ್ಯಾಟರ್ಸನ್‌ ಮತ್ತು ವಿಲ್ಕಿನ್ಸನ್‌ ಕುಟುಂಬಗಳನ್ನೇ ನಾಶ ಮಾಡಿದ್ದೀರಿ. ನಿಮ್ಮ ಸ್ವಂತ ಮಕ್ಕಳಿಗೂ ಅಪಾರ ದುಃಖ ತೊಂದೊಡ್ಡಿದ್ದೀರಿ. ಅವರ ಪ್ರೀತಿಯ ಅಜ್ಜ–ಅಜ್ಜಿಯನ್ನು ಕಸಿದುಕೊಂಡಿದ್ದೀರಿ' ಎಂದು ನ್ಯಾ. ಬೀಲೆ ಅವರು ತೀರ್ಪು ಪ್ರಕಟಿಸುವ ವೇಳೆ ಹೇಳಿದ್ದಾರೆ.

ಸೈಮನ್‌ ಅವರು ಆಹ್ವಾನವನ್ನು ಸ್ವೀಕರಿಸಿ ಊಟಕ್ಕೆ ಹೋಗಿದ್ದರೆ, ಅವರೂ ಮೃತಪಡುವ ಸಾಧ್ಯತೆ ಇತ್ತು ಎಂದಿರುವ ನ್ಯಾ. ಬೀಲೆ, ದೋಷಿ ಮಹಿಳೆಗೆ 33 ವರ್ಷಗಳವರೆಗೆ ಪರೋಲ್‌ ನೀಡದಂತೆಯೂ ಆದೇಶಿಸಿದ್ದಾರೆ.

2023ರ ನವೆಂಬರ್‌ 2ರಿಂದ ಜೈಲಿನಲ್ಲಿರುವ ಎರಿಕ್‌ಗೆ ಮೇಲ್ಮನವಿ ಸಲ್ಲಿಸಲು 28 ದಿನಗಳ ಕಾಲಾವಕಾಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.