ADVERTISEMENT

ಕೋವಿಡ್‌ ಹೆಚ್ಚಳ: ಆಸ್ಟ್ರಿಯಾದಲ್ಲಿ ನ.22ರಿಂದ ಲಾಕ್‌ಡೌನ್‌ ಘೋಷಣೆ

ಏಜೆನ್ಸೀಸ್
Published 19 ನವೆಂಬರ್ 2021, 13:08 IST
Last Updated 19 ನವೆಂಬರ್ 2021, 13:08 IST
ಅಲೆಕ್ಸಾಂಡರ್ ಶಾಲೆನ್‌ಬರ್ಗ್
ಅಲೆಕ್ಸಾಂಡರ್ ಶಾಲೆನ್‌ಬರ್ಗ್   

ಬರ್ಲಿನ್: ಆಸ್ಟ್ರಿಯಾದಲ್ಲಿ ಕೋವಿಡ್‌–19ನ ನಾಲ್ಕನೇ ಅಲೆ ಕಾಣಿಸಿಕೊಂಡಿದ್ದು, ಸೋಂಕು ಪ್ರಸರಣ ತಡೆಯುವ ಸಲುವಾಗಿ ಸೋಮವಾರದಿಂದ ಲಾಕ್‌ಡೌನ್‌ ಘೋಷಿಸಲಾಗಿದೆ.

‘ಮೊದಲ ಹಂತವಾಗಿ ನ.22ರಿಂದ 10 ದಿನಗಳ ಕಾಲ ಲಾಕ್‌ಡೌನ್‌ ಜಾರಿಗೊಳಿಸಲಾಗುವುದು. ಐದನೇ ಅಲೆ ಬಾಧಿಸುವುದು ನಮಗೆ ಇಷ್ಟ ಇಲ್ಲ’ ಎಂದು ಚಾನ್ಸಲರ್ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಶುಕ್ರವಾರ ಹೇಳಿದರು.

‘ರೆಸ್ಟೊರೆಂಟ್‌ಗಳನ್ನು ಬಂದ್‌ ಮಾಡಲಾಗುವುದು, ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗುವುದು. ಶಾಲೆಗಳನ್ನು ಸಹ ಮುಚ್ಚಲಾಗುತ್ತಿದ್ದು, ಮಕ್ಕಳು ಮನೆಯಲ್ಲಿಯೇ ಕಲಿಕೆ ಮುಂದುವರಿಸಬೇಕು’ ಎಂದು ಅವರು ಹೇಳಿದ್ದಾರೆ.

ADVERTISEMENT

ಲಸಿಕೆ ಕಡ್ಡಾಯ: ಮುಂದಿನ ವರ್ಷ ಫೆಬ್ರುವರಿ ಒಂದರಿಂದ ಕೋವಿಡ್ ಲಸಿಕೆ ಪಡೆದುಕೊಂಡಿರುವುದೂ ಕಡ್ಡಾಯವಾಗಲಿದೆ ಎಂದುಚಾನ್ಸಲರ್ ಘೋಷಿಸಿದ್ದಾರೆ.

‘ಹಲವು ತಿಂಗಳುಗಳಿಂದ ಜನರ ಮನವೊಲಿಸಿದ್ದರೂ ಸಾಕಷ್ಟು ಮಂದಿ ಲಸಿಕೆ ಪಡೆಯುವಂತೆ ಮಾಡುವುದು ನಮ್ಮಿಂದ ಸಾಧ್ಯವಾಗಿಲ್ಲ. ಲಸಿಕೆ ಪಡೆದವರ ಸಂಖ್ಯೆ ಹೆಚ್ಚಿಸುವುದೊಂದೇ ಕೋವಿಡ್ ಬಿಕ್ಕಟ್ಟಿನಿಂದ ಹೊರಬರಲು ಇರುವ ಏಕೈಕ ಮಾರ್ಗವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಲಸಿಕೆ ಪಡೆಯಲು ನಿರಾಕರಿಸುತ್ತಿರುವವರು ಆರೋಗ್ಯ ವ್ಯವಸ್ಥೆಯ ಮೇಲೆಯೇ ದಾಳಿ ಮಾಡುತ್ತಿದ್ದಾರೆ. ಲಸಿಕೆ ಪಡೆಯುವುದೇ ಸಾಂಕ್ರಾಮಿಕದಿಂದ ಹೊರಬರುವ ದಾರಿ’ ಎಂದು ಅವರು ಹೇಳಿದ್ದಾರೆ.

ಸುಮಾರು 90 ಲಕ್ಷ ಜನಸಂಖ್ಯೆ ಹೊಂದಿರುವ ಆಸ್ಟ್ರಿಯಾದಲ್ಲಿ ಗುರುವಾರ ಒಂದೇ ದಿನ 15,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.