ADVERTISEMENT

ರಶ್ದಿ ಸ್ಥಿತಿ ಗಂಭೀರ: ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 22:45 IST
Last Updated 13 ಆಗಸ್ಟ್ 2022, 22:45 IST
   

ನ್ಯೂಯಾರ್ಕ್‌: ಖ್ಯಾತ ಲೇಖಕ ಸಲ್ಮಾನ್‌ ರಶ್ದಿ (75) ಅವರ ಸ್ಥಿತಿ ಗಂಭೀರವಾಗಿಯೇ ಇದೆ. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಮತ್ತು ಅವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ. ನ್ಯೂಯಾರ್ಕ್‌ ಸಮೀಪದ ಷಟೌಕ್ವಾ ಎಂಬಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಅಪರಿಚಿತನೊಬ್ಬ ಶುಕ್ರವಾರ ಇರಿದಿದ್ದ. ಅವರು ಬರೆದ ‘ಸಟಾನಿಕ್‌ ವರ್ಸಸ್‌’ ಎಂಬ ಕಾದಂಬರಿಯಲ್ಲಿ ಇಸ್ಲಾಂ ಧರ್ಮಕ್ಕೆ ಅಪಮಾನವಾಗಿದೆ ಎಂದು ಆರೋಪಿಸಿ ಅವರ ಹತ್ಯೆಗೆ ಇರಾನ್‌ 1989ರಲ್ಲಿ ಫತ್ವಾ ಹೊರಡಿಸಿತ್ತು.

ರಶ್ದಿ ಅವರ ತೋಳಿನ ನರಗಳು, ಪಿತ್ತಜನಕಾಂಗ ಹಾನಿಗೊಂಡಿವೆ. ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರ ಏಜೆಂಟ್‌ ಆ್ಯಂಡ್ರ್ಯೂ ವೈಲಿ ತಿಳಿಸಿದ್ದಾರೆ.

ರಶ್ದಿ ಅವರನ್ನು ಇರಿದ ವ್ಯಕ್ತಿಯನ್ನು ಹಾದಿ ಮಟರ್‌ (24) ಎಂದು ಗುರುತಿಸಲಾಗಿದೆ. ಈತ ನ್ಯೂಜೆರ್ಸಿಯ ಫೇರ್‌ಫೀಲ್ಡ್‌ನವನು. ಇರಿತಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಆತನ ಮೇಲೆ ಕೊಲೆಯತ್ನ ಮತ್ತು ಹಲ್ಲೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

1981ರಲ್ಲಿ ಪ್ರಕಟವಾದ ‘ಮಿಡ್‌ನೈಟ್ಸ್‌ ಚಿಲ್ಡ್ರನ್‌’ ಎಂಬ ಕಾದಂಬರಿಯ ಮೂಲಕ ರಶ್ದಿ ಪ್ರಸಿದ್ಧಿಗೆ ಬಂದರು. ಈ ಕೃತಿಗೆ ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ದೊರೆತಿತ್ತು. ಸ್ವಾತಂತ್ರ್ಯೋತ್ತರ ಭಾರತದ ಕತೆಯನ್ನು ಈ ಕಾದಂಬರಿ ಹೊಂದಿದೆ.

ಮುಂಬೈಯಲ್ಲಿ 1947ರಲ್ಲಿ ಜನಿಸಿದ ರಶ್ದಿ, ಬ್ರಿಟನ್‌ಗೆ ತೆರಳಿ ವಿದ್ಯಾಭ್ಯಾಸವನ್ನು ಅಲ್ಲಿಯೇ ಪಡೆದರು. ವಿದ್ಯಾಭ್ಯಾಸದ ನಂತರ ಅವರು ಅಲ್ಲಿಯೇ ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.