ವಿಮಾನ
(ಸಾಂದರ್ಭಿಕ ಚಿತ್ರ)
ಮಾಸ್ಕೊ: ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನಯಾನ ಕಂಪನಿಗೆ ಸೇರಿದ ವಿಮಾನವು ಕಜಕಸ್ತಾನದ ಅಕ್ತೌ ನಗರದಲ್ಲಿ ಬುಧವಾರ ಅಪಘಾತ ಕ್ಕೀಡಾಗಿದೆ. ವಿಮಾನದಲ್ಲಿ ಇದ್ದ 67 ಜನರ ಪೈಕಿ 38 ಮಂದಿ ಸಾವಿಗೀಡಾಗಿದ್ದಾರೆ. 29 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಜಕಸ್ತಾನದ ಅಧಿಕಾರಿಗಳು ನೀಡಿದ ಮಾಹಿತಿ ಉಲ್ಲೇಖಿಸಿ, ಉಪಪ್ರಧಾನಿ ಕನತ್ ಬೊಝುಂಜೀವ್ ಅವರು, 38 ಮಂದಿ ಮೃತಪಟ್ಟಿದ್ದಾರೆಂದು ರಷ್ಯಾದ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ವಿಮಾನದಲ್ಲಿ ಇದ್ದ 67 ಮಂದಿಯಲ್ಲಿ ಐವರು ಸಿಬ್ಬಂದಿಯೂ ಸೇರಿದ್ದಾರೆ.
‘ವಿಮಾನದ ಇಬ್ಬರೂ ಪೈಲಟ್‌ಗಳು ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ‘ವೈದ್ಯಕೀಯ ನೆರವು ಸಿಬ್ಬಂದಿ’ಯನ್ನು ಉಲ್ಲೇಖಿಸಿ ರಷ್ಯಾದ ಇನ್ನೊಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ವಿಮಾನವು ಅಜರ್‌ಬೈಜಾನ್ ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನಿ ನಗರಕ್ಕೆ ತೆರಳುತ್ತಿತ್ತು. ಆದರೆ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದ ಕಾರಣಕ್ಕೆ ತುರ್ತು ಸನ್ನಿವೇಶ ಎದುರಾಯಿತು. ಹೀಗಾಗಿ ವಿಮಾನದ ಪೈಲಟ್ ಅಕ್ತೌ ನಗರದ ಕಡೆ ವಿಮಾನ ತಿರುಗಿಸಿದರು ಎನ್ನಲಾಗಿದೆ. ವಿಮಾನವು ಆಗಸದಿಂದ ನೆಲಕ್ಕೆ ಅಪ್ಪಳಿಸುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.