ವಕೀಲರ ಜೊತೆ ಮಹಮ್ಮದ್ ಯೂನಸ್
(ರಾಯಿಟರ್ಸ್ ಸಂಗ್ರಹ ಚಿತ್ರ)
ಢಾಕಾ: ನೊಬೆಲ್ ಶಾಂತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಯೂನಸ್ ಹಾಗೂ 13 ಜನ ಇತರರ ವಿರುದ್ಧ 2 ಮಿಲಿಯನ್ ಡಾಲರ್‌ಗೂ (₹16.71 ಕೋಟಿ) ಹೆಚ್ಚಿನ ಮೊತ್ತದ ವಂಚನೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಬುಧವಾರ ದೋಷಾರೋಪ ನಿಗದಿ ಮಾಡಿದೆ.
ಬಡವರು, ಮಹಿಳೆಯರಿಗೆ ಕಿರುಸಾಲ ನೀಡುವಲ್ಲಿ ಯೂನಸ್ ಅವರ ಸಾಧನೆಯನ್ನು ಗುರುತಿಸಿ, ಅವರಿಗೆ 2006ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿದೆ. ಯೂನಸ್ ಅವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಅಧಿಕಾರಿಗಳು ತಮಗೆ ಹಾಗೂ ಸಹೋದ್ಯೋಗಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕೂಡ ಯೂನಸ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಆರೋಪಗಳನ್ನು ಕೈಬಿಡಬೇಕು ಎಂಬ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸೈಯದ್ ಅರಾಫತ್ ಹುಸೇನ್ ಅವರು ವಜಾಗೊಳಿಸಿದರು.
ಯೂನಸ್ ಹಾಗೂ ಇತರರು ಗ್ರಾಮೀಣ್ ಟೆಲಿಕಾಂ ಕಂಪನಿಯ ಕಾರ್ಮಿಕರ ಕಲ್ಯಾಣ ನಿಧಿಯ 2 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ. ಹಣದ ಅಕ್ರಮ ವರ್ಗಾವಣೆ ಆರೋಪ ಕೂಡ ಇವರ ಮೇಲಿದೆ. ಗ್ರಾಮೀಣ್ ಟೆಲಿಕಾಂ ಕಂಪನಿಯು ಲಾಭದ ಉದ್ದೇಶವಿಲ್ಲದ ಕಂಪನಿಯಾಗಿ ನೋಂದಾಯಿತವಾಗಿದೆ.
ಪ್ರಾಸಿಕ್ಯೂಷನ್ ಕಡೆಯವರು ತಮ್ಮ ವಾದಕ್ಕೆ ಪ್ರಾಥಮಿಕ ಆಧಾರಗಳನ್ನು ಒದಗಿಸಿದ್ದಾರೆ, ಹಣದ ದುರ್ಬಳಕೆ ಆಗಿದೆ ಎಂಬುದನ್ನು ಹಾಗೂ ಹಣವನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸಿರುವುದನ್ನು ಸಾಬೀತು ಮಾಡಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು. ವಿಚಾರಣೆಯು ಜುಲೈ 15ರಿಂದ ಶುರುವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.