ADVERTISEMENT

ಬಾಂಗ್ಲಾದೇಶ: ಮಾಜಿ ಪ್ರಧಾನಿ ಖಲೀದಾ ಜಿಯಾ ಶಿಕ್ಷೆ ಪ್ರಮಾಣ ಕಡಿತಗೊಳಿಸಲು ಪರಿಶೀಲನೆ

ಪಿಟಿಐ
Published 4 ಮಾರ್ಚ್ 2021, 8:07 IST
Last Updated 4 ಮಾರ್ಚ್ 2021, 8:07 IST
ಖಲಿದಾ ಜಿಯಾ
ಖಲಿದಾ ಜಿಯಾ   

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲಿದಾ ಜಿಯಾ ಅವರಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವುದು ಮತ್ತು ಜಾಮೀನು ಪಡೆಯಲು ವಿಧಿಸಿರುವ ಷರತ್ತುಗಳನ್ನು ಸಡಿಲಗೊಳಿಸುವ ಬಗ್ಗೆ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳಲ್ಲಿ 2018ರ ಫೆಬ್ರುವರಿ 8ರಿಂದ ಖಲಿದಾ ಜಿಯಾ ಅವರು 17 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದರೆ, ಅನಾರೋಗ್ಯದ ಕಾರಣ ಶಿಕ್ಷೆ ಪ್ರಮಾಣ ಮತ್ತು ಜಾಮೀನು ಪಡೆಯಲು ವಿಧಿಸಿರುವ ಷರತ್ತುಗಳನ್ನು ಸಡಿಲಿಸುವ ‌ಬಗ್ಗೆ ಕಾನೂನು ಸಚಿವಾಲಯದ ಜತೆ ಚರ್ಚಿಸಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.

2020ರ ಮಾರ್ಚ್‌ನಲ್ಲಿ 74 ವರ್ಷದ ಖಲಿದಾ ಜಿಯಾ ಅವರನ್ನು ಆರು ತಿಂಗಳ ಅವಧಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ, ಮನೆಯಲ್ಲಿರಬೇಕು ಮತ್ತು ವಿದೇಶಕ್ಕೆ ತೆರಳಬಾರದು ಎಂದು ಷರತ್ತುಗಳನ್ನು ವಿಧಿಸಲಾಗಿತ್ತು. ಮತ್ತೆ ಸೆಪ್ಟೆಂಬರ್‌ನಲ್ಲಿ ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತು.

ADVERTISEMENT

‘ಖಲಿದಾ ಜಿಯಾ ಅವರ ಕುಟುಂಬದಿಂದ ಮನವಿ ಪತ್ರ ಸ್ವೀಕರಿಸಲಾಗಿದೆ. ಈ ಮನವಿಯನ್ನು ಪರಿಶೀಲಿಸುವಂತೆ ಕಾನೂನು ಸಚಿವಾಲಯಕ್ಕೆ ಕಳುಹಿಸಲಾಗುವುದು’ ಎಂದು ಗೃಹ ಸಚಿವ ಅಸಾದುಝಾಮಾನ್‌ ಖಾನ್‌ ಕಮಲ್‌ ತಿಳಿಸಿದ್ದಾರೆ.

1991ರಿಂದ ಮೂರು ಬಾರಿ ಪ್ರಧಾನಿಯಾಗಿ ಜಿಯಾ ಕಾರ್ಯನಿರ್ವಹಿಸಿದ್ದರು. 2018ರ ಚುನಾವಣೆಯಲ್ಲಿ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಹೀನಾಯವಾಗಿ ಪರಾಭವಗೊಂಡಿತ್ತು. 300ಸದಸ್ಯರ ಸಂಸತ್‌ನಲ್ಲಿ ಕೇವಲ ಆರು ಸ್ಥಾನಗಳಲ್ಲಿ ಬಿಎನ್‌ಪಿ ಗೆಲುವು ಸಾಧಿಸಿತ್ತು.

ಅನಾಥಾಶ್ರಮಗಳಿಗೆ ನೀಡಿದ್ದ ವಿದೇಶಿ ದೇಣಿಗೆಯನ್ನು ಅಕ್ರಮವಾಗಿ ಪಡೆದ ಆರೋಪಕ್ಕಾಗಿ ಜಿಯಾ ಅವರಿಗೆ 2018ರಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಅದೇ ವರ್ಷ ಇನ್ನೊಂದು ಭ್ರಷ್ಟಾಚಾರ ಪ್ರಕರಣದಲ್ಲಿಯೂ ಅವರು ಸಿಲುಕಿ ಶಿಕ್ಷೆಗೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.