
ನವದೆಹಲಿ: ಬಾಂಗ್ಲಾದೇಶದ ಹಂಗಾಮಿ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್, ಕಾನೂನುಬಾಹಿರ, ಹಿಂಸಾತ್ಮಕ ಆಡಳಿತವನ್ನು ನಡೆಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ.
2024ರಲ್ಲಿ ದೇಶ ತೊರೆದ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಧ್ವನಿ ಸಂದೇಶದ ಮೂಲಕ ಭಾಷಣ ಮಾಡಿರುವ ಅವರು, ದೇಶದಲ್ಲಿ ಭಯೋತ್ಪಾದನೆಯಿಂದ ಕೂಡಿದ, ಕಾನೂನುಬಾಹಿರತೆಗೆ ಅನುವು ಮತ್ತು ಪ್ರಜಾಪ್ರಭುತ್ವಮುಕ್ತ ಯುಗವನ್ನು ಸ್ಥಾಪಿಸಿದ್ದಾರೆ ಎಂದು ದೂಷಿಸಿದರು.
ದೆಹಲಿಯಲ್ಲಿರುವ ವಿದೇಶಿ ಬಾತ್ಮಿದಾರರ ಕ್ಲಬ್‌ಗೆ ನೀಡಿದ ಆಡಿಯೊ ಸಂದೇಶದಲ್ಲಿ ಮಾತನಾಡಿರುವ ಅವರು, ತಮ್ಮ ದೇಶದ ರಾಜಕೀಯ ಬಿಕ್ಕಟ್ಟನ್ನು ವಿವರಿಸಿದರು. ವಿದೇಶಿಗರ ಕೈಗೊಂಬೆ ಆಗಿರುವ ಆಡಳಿತವನ್ನು ಉರುಳಿಸಲು ಎದ್ದು ನಿಲ್ಲುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದರು.
‘ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿ' ಎಂಬ ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಹಸೀನಾ ಅವರ ಅವಾಮಿ ಲೀಗ್‌ನ ನಾಯಕರು, ಬಾಂಗ್ಲಾದ ಮಾಜಿ ಮಂತ್ರಿಗಳು ಮತ್ತು ಬಾಂಗ್ಲಾದೇಶಿ ವಲಸಿಗರು ಭಾಗವಹಿಸಿದ್ದರು.
ಹಸೀನಾ ವೈಯಕ್ತಿಕವಾಗಿ ಕಾಣಿಸಿಕೊಳ್ಳದಿದ್ದರೂ, ತುಂಬಿದ ಸಭಾಂಗಣದಲ್ಲಿ ಅವರ ಭಾಷಣ ಪ್ರಸಾರವಾಯಿತು.
ಯೂನಸ್ ಅವರನ್ನು ಕೊಲೆಗಾರ ಫ್ಯಾಸಿಸ್ಟ್, ಹಣ ಅಕ್ರಮವಾಗಿ ವರ್ಗಾಯಿಸುವವ ಮತ್ತು ಅಧಿಕಾರದ ದಾಹದ ದೇಶದ್ರೋಹಿ ಎಂದು ಪದೇ ಪದೇ ಟೀಕಿಸಿದರು.
ದೇಶದ ಬೃಹತ್ ಜೈಲು ಮತ್ತು ಮರಣದಂಡನೆಯ ಪ್ರದೇಶವು ಸಾವಿನ ಕೂಪವಾಗಿ ಪರಿವರ್ತನೆಯಾಗಿದೆ. ಪ್ರತ್ಯೇಕತಾವಾದಿ ಮತ್ತು ವಿದೇಶಿ ಶಕ್ತಿಗಳು ದೇಶದ ಹಿತಾಸಕ್ತಿಯನ್ನು ಹಾಳುಮಾಡುತ್ತಿವೆ ಎಂದು ಟೀಕಿಸಿದರು.
ಒಂದು ಗಂಟೆಗೂ ಹೆಚ್ಚು ಸಮಯದ ತಮ್ಮ ಭಾಷಣದಲ್ಲಿ ಹಸೀನಾ, 2024ರ ಆಗಸ್ಟ್ 5ರಂದು ತಮ್ಮನ್ನು ಅಧಿಕಾರದಿಂದ ಒತ್ತಾಯಪೂರ್ವಕವಾಗಿ ಕೆಳಗಿಳಿಸಲಾಯಿತು. ಅದೊಂದು ಸೂಕ್ಷ್ಮವಾಗಿ ಹೆಣೆದಿದ್ದ ಸಂಚು ಎಂದು ಟೀಕಿಸಿದ್ದಾರೆ.
ಅವತ್ತಿನಿಂದ ದೇಶವು ಭಯೋತ್ಪದನಾ ಯುಗಕ್ಕೆ ಜಾರಿದೆ. ಪ್ರಜಾಪ್ರಭುತ್ವ ಗಡೀಪಾರಾಗಿದೆ. ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವು ಅನಿಯಂತ್ರಿತವಾಗಿ ಬೆಳೆಯಲು ಅವಕಾಶ ಮಾಡಿಕೊಡಲಾಗಿದೆ ಎಂದೂ ದೂರಿದ್ದಾರೆ.
ಜನರ ಜೀವ ಮತ್ತು ಆಸ್ತಿಪಾಸ್ತಿಗೆ ಯಾವುದೇ ರಕ್ಷಣೆ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ನೆಲಕಚ್ಚಿದೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.