ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸುವಂತೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಗುರುವಾರ ಕೋರಿದ್ದಾರೆ. ದೇಶದಲ್ಲಿ ಕಳೆದ ವರ್ಷ ಸಾಮೂಹಿಕ ಪ್ರತಿಭಟನೆಗಳನ್ನು ನಡೆಸಿದ ಸಂದರ್ಭದಲ್ಲಿ ಮಾಡಿದಂತಹ ಮಾನವೀಯತೆ ವಿರುದ್ಧದ ಅಪರಾಧಗಳ ಹಿಂದಿನ ಮಾಸ್ಟರ್ ಮೈಂಡ್ ಮತ್ತು ಪ್ರಧಾನ ಆರೋಪಿ ಅವರು ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ನಡೆದ ವಿದ್ಯಾರ್ಥಿಗಳ ನೇತೃತ್ವದ ಸಾಮೂಹಿಕ ಪ್ರತಿಭಟನೆಯಿಂದಾಗಿ 78 ವರ್ಷದ ಹಸೀನಾ ಪದಚ್ಯುತಗೊಂಡಿದ್ದರು. ಅದರ ನಂತರ ಅವರು ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.
ಹಸೀನಾ ಅವರ ಸರ್ಕಾರ ಪ್ರತಿಭಟನಕಾರರ ಮೇಲೆ ಭದ್ರತಾ ಕ್ರಮ ಕೈಗೊಳ್ಳಲು ಆದೇಶಿಸಿದ್ದರಿಂದ 2024ರ ಜುಲೈ 15ರಿಂದ ಆಗಸ್ಟ್ 15ರವರೆಗೆ 1,400 ಜನರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ವರದಿ ಹೇಳಿದೆ.
‘ಶೇಖ್ ಹಸೀನಾ ಅವರು ಯಾವುದೇ ಪಶ್ಚಾತ್ತಾಪ ಇಲ್ಲದ ಹೃದಯಹೀನ ಅಪರಾಧಿಯಾಗಿದ್ದು, ಗರಿಷ್ಠ ಶಿಕ್ಷೆಗೆ ಅರ್ಹರಾಗಿದ್ದಾರೆ. ಅವರಿಗೆ ಯಾವುದೇ ಕರುಣೆ ತೋರಿಸಬಾರದು’ ಎಂದು ಮುಖ್ಯ ಪ್ರಾಸಿಕ್ಯೂಟರ್ ಮುಹಮ್ಮದ್ ತಾಜುಲ್ ಇಸ್ಲಾಂ ಹೇಳಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಬಿಎಸ್‌ಎಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.