ADVERTISEMENT

ಬಾಂಗ್ಲಾದೇಶ: ಹಸೀನಾ ವಿರುದ್ಧ ಸಾಮೂಹಿಕ ಹತ್ಯೆ ಆರೋಪ

ಪಿಟಿಐ
Published 1 ಜೂನ್ 2025, 15:55 IST
Last Updated 1 ಜೂನ್ 2025, 15:55 IST
ಶೇಖ್‌ ಹಸೀನಾ
ಶೇಖ್‌ ಹಸೀನಾ   

ಢಾಕಾ: ಮಾಜಿ ಪ್ರಧಾನಿ ಶೇಖ್‌ ಹಸೀನಾ ಮತ್ತು ಇತರ ಇಬ್ಬರ ವಿರುದ್ಧ ಸಾಮೂಹಿಕ ಹತ್ಯೆ ಸೇರಿದಂತೆ ಹಲವು ಆರೋಪಗಳ ಮೇಲೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಭಾನುವಾರ ದೋಷಾರೋಪಣೆ ಹೊರಿಸಿದೆ.

ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಲು ಯತ್ನಿಸಿದ ಪ್ರಮುಖ ಆರೋಪ ಅವರ ಮೇಲಿದೆ. ಈ ಪ್ರತಿಭಟನೆ ಬೆನ್ನಲ್ಲೇ ಹಸೀನಾ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಲಾಯಿತು. ಅದಾದ 10 ತಿಂಗಳ ಬಳಿಕ, ಹಸೀನಾ ಅವರ ಗೈರಿನಲ್ಲಿ ಈ ವಿಚಾರಣೆ ಆರಂಭವಾಗಿದೆ. 

ಮೂವರು ನ್ಯಾಯಮೂರ್ತಿಗಳ ಐಸಿಟಿ ಪೀಠವು ವಿಚಾರಣೆ ನಡೆಸಿತು. ಹಸೀನಾ ಅವರ ಸರ್ಕಾರವು ಪ್ರತಿಭಟನೆಯನ್ನು ಅತ್ಯಂತ ಕ್ರೂರವಾಗಿ ಹತ್ತಿಕ್ಕಲು ಪ್ರಯತ್ನಿಸಿತ್ತು ಎಂದು ಪಾಸಿಕ್ಯೂಷನ್‌ ಮಾಡಿದ ಆರೋಪವನ್ನು ಪೀಠ ಪರಿಗಣಿಸುವುದಾಗಿ ತಿಳಿಸಿತು.

ADVERTISEMENT

ಹಸೀನಾ ವಿರುದ್ಧ ವಾರಂಟ್‌:

ಹಸೀನಾ ಮತ್ತು ಆಗಿನ ಗೃಹ ಸಚಿವ ಅಸದುಜ್ಜಮಾನ್‌ ಖಾನ್‌ ಕಮಲ್‌ ವಿರುದ್ಧ ಪೀಠವು ಹೊಸದಾಗಿ ಬಂಧನದ ವಾರಂಟ್‌ ಹೊರಡಿಸಿತು.  ಮೂರನೇ ಆರೋಪಿ, ಆಗಿನ ಪೊಲೀಸ್‌ ಇನ್ಸ್‌ಪೆಕ್ಟರ್‌ ಜನರಲ್‌ ಚೌಧರಿ ಅಬ್ದುಲ್ಲಾ ಅಲ್‌– ಮಾಮುನ್‌ ಈಗಾಗಲೇ ಬಂಧನದಲ್ಲಿದ್ದಾರೆ. 

ಬಾಂಗ್ಲಾದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯಾಯಮಂಡಳಿ ವಿಚಾರಣೆಯನ್ನು ಸರ್ಕಾರಿ ವಾಹಿನಿಯಲ್ಲಿ ನೇರ ಪ್ರಸಾರ ಮಾಡಲಾಯಿತು. 

ಕಳೆದ ವರ್ಷ ಜುಲೈ 15ರಿಂದ ಆಗಸ್ಟ್ 15ರವರೆಗೆ ನಡೆದ ಹಿಂಸಾಚಾರದಲ್ಲಿ 1,400 ಜನರು ಮೃತಪಟ್ಟಿದ್ದರು ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.  

ವ್ಯವಸ್ಥಿತ ದಾಳಿ– ಪ್ರಾಸಿಕ್ಯೂಷನ್‌ ಆರೋಪ:

‘ಪ್ರತಿಭಟನೆಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ಹಸೀನಾ ಅವರು ಎಲ್ಲ ಮಾರ್ಗಗಳನ್ನು ಬಳಸಿದ್ದರು. ಈ ಮೂಲಕ ಮಾನವೀಯತೆಯ ವಿರುದ್ಧ ಅವರು ಅಪರಾಧಗಳನ್ನು ಎಸಗಿದ್ದಾರೆ’ ಎಂದು ಪ್ರಾಸಿಕ್ಯೂಷನ್‌ ತಂಡದ ಮುಖ್ಯಸ್ಥ ಮೊಹಮ್ಮದ್‌ ತಾಜುಲ್‌ ಇಸ್ಲಾಂ ವಾದಿಸಿದರು.

ಸಾಮೂಹಿಕ ಹತ್ಯೆಯನ್ನು ತಡೆಯುವಲ್ಲಿ ವೈಫಲ್ಯ, ಪ್ರಚೋದನೆ, ಸಹಭಾಗಿತ್ವ, ಪಿತೂರಿ, ಅನುಕೂಲ ಕಲ್ಪಿಸುವುದು ಸೇರಿದಂತೆ ವಿವಿಧ ಆರೋಪಗಳನ್ನು ಹಸೀನಾ ಮತ್ತು ಇತರ ಇಬ್ಬರ ವಿರುದ್ಧ ಇಸ್ಲಾಂ ಮಾಡಿದರು.

‘ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಮಾನವೀಯತೆ ವಿರುದ್ಧ ಅಪರಾಧಗಳು ನಡೆಯಬಾರದು. ಆದರೆ ಹಸೀನಾ ಅವರ ಆದೇಶದ ಮೇರೆಗೆ ವ್ಯವಸ್ಥಿತವಾಗಿ ಹತ್ಯೆಗಳು, ಕೊಲೆಯತ್ನಗಳು ನಡೆದಿವೆ’ ಎಂದು ಅವರು ಹೇಳಿದರು.

ತನಿಖಾಧಿಕಾರಿಗಳು ಹಸೀನಾ ಅವರ ವಿಡಿಯೊ ತುಣುಕುಗಳು, ಆಡಿಯೊ ಸಾಕ್ಷ್ಯ, ದೂರವಾಣಿ ಸಂಭಾಷಣೆ ಮತ್ತಿತರ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ಅವರು ವಿವರಿಸಿದರು.

ಜಮಾತ್‌–ಎ– ಇಸ್ಲಾಮಿಗೆ ಅನುಮತಿ

ಶೇಖ್‌ ಹಸೀನಾ ಅವರ ಅವಧಿಯಲ್ಲಿ ನಿಷೇಧಕ್ಕೆ ಒಳಗಾಗಿದ್ದ ಬಾಂಗ್ಲಾದೇಶದ ಅತ್ಯಂತ ದೊಡ್ಡ ಇಸ್ಲಾಮಿಸ್ಟ್‌ ಪಕ್ಷವಾದ ‘ಜಮಾತ್‌–ಎ–ಇಸ್ಲಾಮಿ’ಯದ ನೋಂದಣಿಯನ್ನು ಪುನರ್‌ಸ್ಥಾಪಿಸಿ ಅಲ್ಲಿನ ಸುಪ್ರೀಂ ಕೋರ್ಟ್‌ ಭಾನುವಾರ ತೀರ್ಪು ನೀಡಿದೆ. ಅಲ್ಲದೆ ಚುನಾವಣೆಯಲ್ಲಿ ಭಾಗವಹಿಸಲು ಪಕ್ಷಕ್ಕೆ ಅನುಮತಿಯನ್ನೂ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.