ADVERTISEMENT

ಬಿಬಿಸಿ ಪರ ನಿಂತ ಬ್ರಿಟನ್ ಸರ್ಕಾರ: ಟ್ರಂಪ್‌ ಭಾಷಣ ತಿರುಚಿ ಪ್ರಸಾರ ಮಾಡಿದ ಆರೋಪ

ಏಜೆನ್ಸೀಸ್
Published 12 ನವೆಂಬರ್ 2025, 14:13 IST
Last Updated 12 ನವೆಂಬರ್ 2025, 14:13 IST
ಲೀಸಾ ನ್ಯಾಂಡಿ
ಲೀಸಾ ನ್ಯಾಂಡಿ   

ಲಂಡನ್: 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಡೊನಾಲ್ಡ್ ಟ್ರಂಪ್‌ ಮಾಡಿದ್ದ ಭಾಷಣವನ್ನು ತಿರುಚಿ, ಪ್ರಸಾರ ಮಾಡಿದ್ದ ಆರೋಪಗಳನ್ನು ಎದುರಿಸುತ್ತಿರುವ ಬಿಬಿಸಿ ವಾಹಿನಿ ಕಾರ್ಯವೈಖರಿಯನ್ನು ಬ್ರಿಟನ್‌ ಸರ್ಕಾರ ಸಮರ್ಥಿಸಿಕೊಂಡಿದೆ.

ಬಿಬಿಸಿ ಕಾರ್ಯವೈಖರಿ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿವೆಯಲ್ಲದೇ, ಸಂಸ್ಥೆ ವಿರುದ್ಧ ಮೊಕದ್ದಮೆ ಹೂಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿರುವ ನಡುವೆಯೇ, ಬ್ರಿಟನ್ ಸರ್ಕಾರ ಬಿಬಿಸಿ ಪರ ನಿಂತಿದೆ.

ಇನ್ನೊಂದೆಡೆ, ಬಿಬಿಸಿಗೆ ನೀಡುವ ನೆರವು ಕುರಿತು ಪರಿಶೀಲಿಸಬೇಕು ಹಾಗೂ ಸಂಸ್ಥೆಯನ್ನು ಮರುಸಂಘಟಿಸಬೇಕು ಎಂದು ಮಾಧ್ಯಮ ಕ್ಷೇತ್ರದ ಪ್ರಮುಖರು ಹಾಗೂ ರಾಜಕೀಯ ಮುಖಂಡರಿಂದ ಬಲವಾದ ಕೂಗು ಕೇಳಿಬರುತ್ತಿರುವ ಕಾರಣಕ್ಕೆ, ಸರ್ಕಾರದ ಈ ನಿಲುವಿಗೆ ಮಹತ್ವ ಬಂದಿದೆ.

ADVERTISEMENT

‘ದೇಶದ ಪ್ರಮುಖ ಸುದ್ದಿವಾಹಿನಿಯಾದ ಬಿಬಿಸಿ ಕೆಲ ಸವಾಲುಗಳನ್ನು ಎದುರಿಸುತ್ತಿದೆ. ಈ ಪೈಕಿ ಕೆಲ ಸವಾಲುಗಳನ್ನು ತಾನೇ ಸೃಷ್ಟಿಸಿಕೊಂಡಿದೆ. ಆದಾಗ್ಯೂ, ಬ್ರಿಟನ್‌ನಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ವ್ಯಾಪಕವಾಗಿ ವೀಕ್ಷಿಸುವ ಸುದ್ದಿವಾಹಿನಿ ಇದು’ ಎಂದು ಬ್ರಿಟನ್‌ನ ಸಾಂಸ್ಕೃತಿಕ ಕಾರ್ಯದರ್ಶಿ ಲೀಸಾ ನ್ಯಾಂಡಿ ಹೇಳಿದ್ದಾರೆ.

ಟ್ರಂಪ್‌ ಅವರ ಭಾಷಣವನ್ನು ತಿರುಚಿ, ಕಳೆದ ವರ್ಷ ಪ್ರಸಾರ ಮಾಡಲಾಗಿದ್ದು, ಈ ಕುರಿತಂತೆ ಬಿಬಿಸಿ ಕ್ಷಮೆ ಕೇಳಬೇಕು ಹಾಗೂ ಅವಹೇಳನಕಾರಿ ಸುದ್ದಿ ಪ್ರಸಾರಕ್ಕಾಗಿ ಪರಿಹಾರ ನೀಡಬೇಕು ಎಂಬುದು ಟ್ರಂಪ್‌ ಪರ ವಕೀಲರ ಬೇಡಿಕೆಯಾಗಿತ್ತು. ಇದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ಬಿಬಿಸಿಯ ಪ್ರಧಾನ ನಿರ್ದೇಶಕ ಟಿಮ್‌ ಡೇವಿ ಮತ್ತು ಸಿಇಒ ಡೆಬ್ರೊ ಟರ್ನಿಸ್‌ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದರು ಮತ್ತು ಬಿಬಿಸಿ ಕೂಡ ಕ್ಷಮೆಯಾಚಿಸಿದೆ.

ವಾಸ್ತವ ಸಂಗತಿಗಳು ಮತ್ತು ಅಭಿಪ್ರಾಯಗಳು ಸುದ್ದಿ ಮತ್ತು ವಿವಾದ ಪ್ರತ್ಯೇಕಿಸುವ ಗೆರೆ ಅಪಾಯಕಾರಿ ಎನಿಸುವಷ್ಟು ಅಳಿಸಿ ಹೋಗಿರುವ ಈ ವೇಳೆ ಬಿಬಿಸಿ ತನ್ನ ಛಾಪು ಉಳಿಸಿಕೊಂಡಿದೆ. ಒಂದು ಸಂಸ್ಥೆಯಾಗಿ ಬಿಬಿಸಿ ಬ್ರಿಟನ್‌ಗೆ ಅಗತ್ಯವಾಗಿ ಬೇಕು. 
ಲೀಸಾ ನ್ಯಾಂಡಿ ಬ್ರಿಟನ್‌ನ ಸಾಂಸ್ಕೃತಿಕ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.