ADVERTISEMENT

ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ: ಶ್ವೇತಭವನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 14:16 IST
Last Updated 16 ಫೆಬ್ರುವರಿ 2024, 14:16 IST
ಜಾನ್‌ ಕಿರ್ಬಿ
ಜಾನ್‌ ಕಿರ್ಬಿ   

ವಾಷಿಂಗ್ಟನ್‌: ಭಾರತೀಯರು ಮತ್ತು ಭಾರತೀಯ ಅಮೆರಿಕನ್‌ ವಿದ್ಯಾರ್ಥಿಗಳ ಮೇಲಿನ ದಾಳಿಗಳನ್ನು ತಡೆಯಲು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಅವರ ಆಡಳಿತ ಶ್ರಮಿಸುತ್ತಿದೆ ಎಂದು ಶ್ವೇತಭವನ ಹೇಳಿದೆ.

ದೇಶದ ವಿವಿಧೆಡೆ ಭಾರತೀಯರು ಮತ್ತು ಭಾರತೀಯ ಅಮೆರಿಕನ್‌ ವಿದ್ಯಾರ್ಥಿಗಳ ಮೇಲೆ ದಾಳಿಗಳು ನಡೆದ ಬೆನ್ನಲ್ಲೇ ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಂಯೋಜಕ ಜಾನ್‌ ಕಿರ್ಬಿ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹಿಂಸಾಚಾರಕ್ಕೆ ಕ್ಷಮೆಯಿಲ್ಲ. ಅದರಲ್ಲೂ ಜನಾಂಗೀಯ, ಲಿಂಗ, ಧರ್ಮ ಅಥವಾ ಯಾವುದೇ ಇತರ ಅಂಶಗಳ ಆಧಾರ ಮೇಲೆ ನಡೆಯುವ ಹಿಂಸಾಚಾರವನ್ನು ನಾವು ಸಹಿಸುವುದಿಲ್ಲ. ಇದು ಅಮೆರಿಕದಲ್ಲಿ ಸ್ವೀಕಾರಾರ್ಹವೂ ಅಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ADVERTISEMENT

‘ಈ ರೀತಿಯ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಅಧ್ಯಕ್ಷರು ಮತ್ತು ಆಡಳಿತ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ’ ಎಂದರು. 

ಜಾರ್ಜಿಯಾದ ಲಿಥೋನಿಯಾದ ಡಿಪಾರ್ಟ್‌ಮೆಂಟ್‌ ಸ್ಟೋರ್‌ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ವಿವೇಕ್‌ ಸೈನಿ ಎಂಬ ವಿದ್ಯಾರ್ಥಿಯು ಜನವರಿಯಲ್ಲಿ ಮಾದಕ ವ್ಯಸನಿಯು ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದ. ಫೆಬ್ರುವರಿಯಲ್ಲಿ ಇಂಡಿಯಾನಾ ವೆಸ್ಲಿಯನ್‌ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿ ಸೈಯದ್‌ ಮುಜಾಹಿರ್‌ ಅಲಿ ಮೇಲೆ ಹಲ್ಲೆ ನಡೆದಿತ್ತು. ಕೆಲ ವಾರಗಳಲ್ಲಿ ನಡೆದ ದಾಳಿಗಳಲ್ಲಿ ನಾಲ್ವರು ಭಾರತೀಯ ಅಮೆರಿಕನ್‌ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇಲಿನಾಯ್ಸ್‌ ಅರ್ಬಾನಾ– ಚಾಂಪೇನ್‌ ವಿಶ್ವವಿದ್ಯಾಲಯದ ಅಕುಲ್‌ ಧವನ್‌ ಮತ್ತು ಪುರ್ಡ್ಯೂ ವಿಶ್ವವಿದ್ಯಾಲಯದ ನೀಲ್‌ ಆಚಾರ್ಯ ಅವರು ಜನವರಿಯಲ್ಲಿ ಅಸುನೀಗಿದ್ದರು. ಲಿಂಡ್ನರ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನ ಶ್ರೇಯಸ್‌ ರೆಡ್ಡಿ ಬೆಣಿಗೇರಿ ಅವರ ಮೃತದೇಹ ಇತ್ತೀಚೆಗೆ ಓಹಿಯೊದಲ್ಲಿ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.