ADVERTISEMENT

ಅರ್ಕ್ಟಿಕ್‌ ವನ್ಯಜೀವಿ ಪ್ರದೇಶದಲ್ಲಿ ತೈಲ ಉತ್ಪಾದನೆ ಸ್ಥಗಿತಕ್ಕೆ ಬೈಡನ್‌ ಆದೇಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 7:49 IST
Last Updated 21 ಜನವರಿ 2021, 7:49 IST
ಜೋ ಬೈಡನ್‌
ಜೋ ಬೈಡನ್‌   

ಜುನಿಯು (ಅಲಸ್ಕಾ): ಅಲಸ್ಕಾದ ಅರ್ಕ್ಟಿಕ್‌ ರಾಷ್ಟ್ರೀಯ ವನ್ಯಜೀವಿ ಪ್ರದೇಶದಲ್ಲಿ ತೈಲ ಮತ್ತು ಅನಿಲ ಉತ್ಪಾದನೆಗೆ ನೀಡಲಾಗಿದ್ದ ಗುತ್ತಿಗೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದಾರೆ.

ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಅಧಿಕಾರ ಅವಧಿಯ ಕೊನೆಯ ದಿನಗಳಲ್ಲಿ ಈ ಗುತ್ತಿಗೆಯನ್ನು ನೀಡಿದ್ದರು. ಜನವರಿ 6ರಂದು 1,770 ಚದರ ಕಿಲೋ ಮೀಟರ್‌ ಪ್ರದೇಶದಲ್ಲಿ ಈ ಗುತ್ತಿಗೆ ನೀಡುವ ಆದೇಶಕ್ಕೆ ಸಹಿ ಹಾಕಲಾಗಿತ್ತು. ಆದರೆ, ಈ ಆದೇಶವನ್ನು ಮಂಗಳವಾರದವರೆಗೂ ಬಹಿರಂಗಪಡಿಸಿರಲಿಲ್ಲ.

ರಿಪಬ್ಲಿಕನ್‌ ಸಂಸದರು ಟ್ರಂಪ್‌ ಅವರ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಅತ್ಯಂತ ಮಹತ್ವದ್ದಾಗಿದ್ದು, ಸ್ಥಗಿತಗೊಳಿಸುವ ನಿರ್ಧಾರಕೈಗೊಳ್ಳಬಾರದಿತ್ತು ಎಂದು ಹೇಳಿದ್ದಾರೆ. ತೈಲ ಉತ್ಪಾದನೆ ಅಲಸ್ಕಾದ ಜೀವನಾಡಿಯಾಗಿದೆ. ಅಲಸ್ಕಾದ ಭವಿಷ್ಯದ ದೃಷ್ಟಿಯಿಂದ ಗುತ್ತಿಗೆಯನ್ನು ಮುಂದುವರಿಸಬೇಕಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

‘ಉತ್ತಮ ವೇತನ ನೀಡುವ ಉದ್ಯೋಗಗಳನ್ನು ಕಿತ್ತುಕೊಳ್ಳಲು ಬೈಡನ್‌ ಅವರಿಗೆ ಅಮೆರಿಕದ ಜನತೆ ಅಧಿಕಾರ ನೀಡಿಲ್ಲ’ ಎಂದು ಅಮೆರಿಕದ ಸೆನೆಟರ್‌ ಡ್ಯಾನ್‌ ಸುಲಿವನ್‌ ಹೇಳಿದ್ದಾರೆ.

ಆದರೆ, ತೈಲ ಉತ್ಪಾದನೆಗೆ ಕೈಗೊಳ್ಳುವ ಡ್ರಿಲಿಂಗ್‌ನಿಂದ ವನ್ಯಜೀವಿಗಳ ಜೀವಕ್ಕೆ ಅಪಾಯ ಒದಗಲಿದೆ ಎಂದು ಪರಿಸರವಾದಿಗಳು ಪ್ರತಿಪಾದಿಸಿದ್ದಾರೆ.

ಈ ಪ್ರದೇಶದಲ್ಲಿ ತೈಲ ಸಂಸ್ಕರಣೆ ಕಾರ್ಯಕ್ಕೆ ಬೈಡನ್‌ ಸಹ ವಿರೋಧ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.