ADVERTISEMENT

ಹೂಥಿ ಬಂಡುಕೋರರ ಗುಂಪಿಗೆ ’ಉಗ್ರ ಸಂಘಟನೆ’ ಪಟ್ಟ ನಿರ್ಧಾರ ರದ್ದು: ಅಮೆರಿಕ

ಏಜೆನ್ಸೀಸ್
Published 6 ಫೆಬ್ರುವರಿ 2021, 8:28 IST
Last Updated 6 ಫೆಬ್ರುವರಿ 2021, 8:28 IST
ಯೆಮನ್‌ ರಾಜಧಾನಿ ಸನಾ ವಶಪಡಿಸಿಕೊಂಡ ನಂತರ ಹೂಥಿ ಬಂಡುಕೋರರು ಅಲ್‌–ಸಬೀನ್‌ ಸ್ಕ್ವೇರ್‌ನಲ್ಲಿ ಸೆಲ್ಫಿ ತೆಗೆದುಕೊಂಡರು (ಸಂಗ್ರಹ ಚಿತ್ರ) –ರಾಯಿಟರ್ಸ್‌ ಚಿತ್ರ
ಯೆಮನ್‌ ರಾಜಧಾನಿ ಸನಾ ವಶಪಡಿಸಿಕೊಂಡ ನಂತರ ಹೂಥಿ ಬಂಡುಕೋರರು ಅಲ್‌–ಸಬೀನ್‌ ಸ್ಕ್ವೇರ್‌ನಲ್ಲಿ ಸೆಲ್ಫಿ ತೆಗೆದುಕೊಂಡರು (ಸಂಗ್ರಹ ಚಿತ್ರ) –ರಾಯಿಟರ್ಸ್‌ ಚಿತ್ರ   

ವಾಷಿಂಗ್ಟನ್‌: ಯೆಮೆನ್‌ನಲ್ಲಿ ಸಕ್ರಿಯವಾಗಿರುವ ಹೂಥಿ ಬಂಡುಕೋರರ ಗುಂಪಿಗೆ ಉಗ್ರ ಸಂಘಟನೆ ಪಟ್ಟ ನೀಡಿರುವ ತನ್ನ ನಿರ್ಧಾರವನ್ನು ಕೈಬಿಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಳಿತ ಹೇಳಿದೆ.

‘ಯೆಮನ್‌ನಲ್ಲಿ ಮಾನವ ನಿರ್ಮಿತ ವಿಪತ್ತಿನಿಂದ ಈಗಾಗಲೇ ಜನರು ತತ್ತರಿಸಿದ್ದಾರೆ. ಆ ದೇಶದ ಜನರ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

‘ಬಂಡುಕೋರರ ಗುಂಪಿಗೆ ಉಗ್ರ ಸಂಘಟನೆ ಪಟ್ಟ ನೀಡಿರುವುದನ್ನು ರದ್ದು ಮಾಡಲಾಗಿದೆ. ಆದರೆ, ಹೂಥಿ ಬಂಡುಕೋರರಿಗೆ ಸಂಬಂಧಿಸಿದಂತೆ ಬೈಡನ್‌ ಆಡಳಿತ ಹೊಂದಿರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ADVERTISEMENT

ನಾಗರಿಕರನ್ನು ಗುರಿಯಾಗಿಸಿಕೊಂಡು ಹೂಥಿ ಬಂಡುಕೋರರು ಹಿಂಸಾಕೃತ್ಯದಲ್ಲಿ ತೊಡಗಿದ್ದರು. ಹಲವು ಅಮೆರಿಕ ಪ್ರಜೆಗಳನ್ನು ಅವರು ಅಪಹರಿಸಿದ್ದರು.

ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿದ್ದಾಗ, ಈ ಬಂಡುಕೋರರ ಗುಂಪನ್ನು ಉಗ್ರ ಸಂಘಟನೆ ಎಂದು ಘೋಷಿಸಿದ್ದರು. ಇದರ ಪರಿಣಾಮ ಯೆಮನ್‌ಗೆ ಆಹಾರ ಸೇರಿದಂತೆ ಇತರ ಪರಿಹಾರ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

ಬಂಡುಕೋರರ ಹಿಂಸೆ, ಸಂಘರ್ಷದಿಂದ ಯೆಮನ್‌ನಲ್ಲಿ ಬರ ಬಿದ್ದಿದೆ. ಈಗ ಅಂತರರಾಷ್ಟ್ರೀಯ ನೆರವೂ ಕಡಿತಗೊಂಡರೆ ನಾಗರಿಕರು ಸಂಕಷ್ಟಕ್ಕೀಡಾಗುತ್ತಾರೆ. ಹೀಗಾಗಿ, ಹೂಥಿ ಬಂಡುಕೋರರ ಕುರಿತ ತನ್ನ ನಿರ್ಧಾರವನ್ನು ಕೈಬಿಡುವಂತೆ ವಿಶ್ವಸಂಸ್ಥೆ ಮನವಿ ಮಾಡಿತ್ತು. ಆದರೆ, ಟ್ರಂಪ್‌ ಆಡಳಿತ ಈ ಮನವಿಯನ್ನು ತಿರಸ್ಕರಿಸಿತ್ತು.

ಹೂಥಿ ಬಂಡುಕೋರರು 2014ರಲ್ಲಿ ಯೆಮನ್‌ ರಾಜಧಾನಿ ಸನಾ ಮೇಲೆ ದಾಳಿ ನಡೆಸಿದರು. ನಗರ ಹಾಗೂ ದೇಶದ ಉತ್ತರ ಭಾಗವನ್ನು ತಮ್ಮ ವಶಕ್ಕೆ ಪಡೆದ ಉಗ್ರರು, ಸರ್ಕಾರವನ್ನೇ ಕಿತ್ತೊಗೆದರು.

ದೇಶದಲ್ಲಿ ಸರ್ಕಾರವನ್ನು ಪುನರ್‌ಸ್ಥಾಪಿಸಲು ಅಮೆರಿಕ ಬೆಂಬಲಿತ, ಸೌದಿ ಅರೇಬಿಯಾ ನೇತೃತ್ವದ ಮೈತ್ರಿಕೂಟ ಪ್ರಯತ್ನ ಆರಂಭಿಸಿದೆ. ಆದರೆ, ಈ ಪ್ರಯತ್ನಗಳು ಇನ್ನೂ ಫಲ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.