ADVERTISEMENT

ವಲಸೆ ನೀತಿಯಲ್ಲಿ ಸುಧಾರಣೆ: ಮಸೂದೆ ಅಂಗೀಕಾರಕ್ಕೆ ಬೈಡನ್‌ ಒತ್ತಾಯ

ಪಿಟಿಐ
Published 29 ಏಪ್ರಿಲ್ 2021, 7:31 IST
Last Updated 29 ಏಪ್ರಿಲ್ 2021, 7:31 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ವಲಸೆ ನೀತಿಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ರೂಪಿಸಿರುವ ಮಸೂದೆಯನ್ನು ಶೀಘ್ರವೇ ಅಂಗೀಕರಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸಂಸತ್‌ಅನ್ನು ಒತ್ತಾಯಿಸಿದರು.

ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ‘ಕೋವಿಡ್‌–19 ಪಿಡುಗಿನ ವೇಳೆ ವಲಸಿಗರು ದೇಶಕ್ಕೆ ಅದ್ಭುತ ಸೇವೆ ಸಲ್ಲಿಸಿದ್ದಾರೆ. ವಲಸಿಗರು ಇತಿಹಾಸದುದ್ದಕ್ಕೂ ದೇಶಕ್ಕೆ ಅಪಾರ ಕೊಡುಗೆ ನೀಡಿರುವುದೂ ತಿಳಿದು ಬರುತ್ತದೆ’ ಎಂದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಬೈಡನ್‌ ಅವರು ವಲಸೆ ನೀತಿಯಲ್ಲಿ ಸಮಗ್ರ ಬದಲಾವಣೆಗಳನ್ನು ಒಳಗೊಂಡ ಮಸೂದೆಯನ್ನು ಸಂಸತ್‌ಗೆ ಕಳಿಸಿದ್ದರು.

ADVERTISEMENT

ದಾಖಲೆ ಹೊಂದಿರದ ವಲಸಿಗರಿಗೆ ಪೌರತ್ವ ನೀಡುವುದು, ಅಮೆರಿಕದಲ್ಲಿ ಉದ್ಯೋಗದಲ್ಲಿರುವವರ ಕುಟುಂಬದ ಸದಸ್ಯರಿಗೆ ಗ್ರೀನ್‌ ಕಾರ್ಡ್‌ ವಿತರಣೆಗೆ ನಿಗದಿ ಮಾಡಿದ್ದ ಸಮಯದಲ್ಲಿ ಕಡಿತ ಸೇರಿದಂತೆ ಹಲವಾರು ಬದಲಾವಣೆಗಳನ್ನು ಈ ಮಸೂದೆ ಒಳಗೊಂಡಿದೆ.

‘ವಲಸೆ ಅಮೆರಿಕಕ್ಕೆ ಅಗತ್ಯವಿದೆ. ಈ ವಿಷಯ ಕುರಿತ ಸಂಘರ್ಷಕ್ಕೆ ಕೊನೆ ಹಾಡಬೇಕಿದೆ. ವಲಸೆ ನೀತಿಯಲ್ಲಿ ಸುಧಾರಣೆ ತರುವ ಬಗ್ಗೆ ಕಳೆದ 30 ವರ್ಷಗಳಿಂದಲೂ ರಾಜಕಾರಣಿಗಳು ಮಾತನಾಡುತ್ತಲೇ ಇದ್ದಾರೆ. ವಾಸ್ತವದಲ್ಲಿ ಏನೂ ಆಗಿಲ್ಲ. ಈಗಲಾದರೂ ಸಂಸತ್‌ ಕಾರ್ಯಪ್ರವೃತ್ತವಾಗಬೇಕು’ ಎಂದೂ ಬೈಡನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.