ADVERTISEMENT

ನನಗೆ ಕ್ಯಾನ್ಸರ್ ಎಂದ ಜೋ ಬೈಡನ್: ವೈರಲ್ ವಿಡಿಯೊ ಬಗ್ಗೆ ಶ್ವೇತಭವನದ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2022, 16:47 IST
Last Updated 21 ಜುಲೈ 2022, 16:47 IST
ಜೋ ಬೈಡನ್: ಎಎಫ್‌ಪಿ ಚಿತ್ರ
ಜೋ ಬೈಡನ್: ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮಗೆ ಕ್ಯಾನ್ಸರ್ ಇದೆ ಎಂದು ಹೇಳಿಕೊಂಡಿರುವ ವಿಡಿಯೊವೊಂದು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಈ ಕುರಿತಂತೆ, ಕೂಡಲೇ ಪ್ರತಿಕ್ರಿಯಿಸಿರುವ ಶ್ವೇತಭವನವು, 2020ರ ಜನವರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ತಾವು ಚಿಕಿತ್ಸೆ ಪಡೆದ ಚರ್ಮದ ಕ್ಯಾನ್ಸರ್ ಬಗ್ಗೆ ಬೈಡನ್ ಉಲ್ಲೇಖಿಸುತ್ತಿದ್ದಾರೆ ಎಂದು ಹೇಳಿದೆ.

ತಾವು ಬಾಲ್ಯ ಕಳೆದ ಡೆಲವೇರ್‌ ರಾಜ್ಯದ ಮನೆಯ ಬಳಿ ಇದ್ದ ಸಂಸ್ಕರಣಾಗಾರಗಳಿಂದ ಹಾನಿಕಾರಕ ಹೊಗೆ ಹೊರಸೂಸುವಿಕೆಯನ್ನು ಉಲ್ಲೇಖಿಸುತ್ತಾ, ‘ನಮ್ಮ ತಾಯಿ ನಮ್ಮನ್ನು ನಡೆಯುವುದಕ್ಕಿಂತ ಹೆಚ್ಚಾಗಿ ಓಡಿಸುತ್ತಿದ್ದರು? ಏಕೆಂದರೆ, ಹಾನಿಕಾರಕ ಹೊಗೆಯ ಪರಿಣಾಮ ಹಾಗಿತ್ತು. ಕಿಟಕಿಯಲ್ಲಿ ಅಂಟಿಕೊಂಡಿದ್ದ ತೈಲದ ತ್ಯಾಜ್ಯ ತೆಗೆಯಲು ವಿಂಡ್‌ಶೀಲ್ಡ್ ವೈಪರ್‌ಗಳನ್ನು ಹಾಕಬೇಕಾಗಿತ್ತು. ಅದ್ದರಿಂದಲೇ, ನಾನು ಮತ್ತು ನಾನು ಬೆಳೆದ ಪ್ರದೇಶದ ಇತರ ಅನೇಕ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ದೀರ್ಘಕಾಲದವರೆಗೆ, ಡೆಲವೇರ್ ರಾಜ್ಯವು ಅತಿ ಹೆಚ್ಚು ಕ್ಯಾನ್ಸರ್ ಪೀಡಿತರ ಸಂಖ್ಯೆ ಹೊಂದಿತ್ತು ಎಂದಿದ್ದಾರೆ.

ಹವಾಮಾನ ಬದಲಾವಣೆ ಮತ್ತು ಅದನ್ನು ಎದುರಿಸಲು ಅವರ ಸರ್ಕಾರದ ಮುಂದಿನ ಕ್ರಮಗಳ ಕುರಿತು ಮೆಸಾಚು‌ಸೆಟ್ಸ್‌ನ ಹಳೆಯ ಕಲ್ಲಿದ್ದಲು ಗಣಿಯಲ್ಲಿ ಬೈಡನ್ ಮಾತನಾಡುತ್ತಿದ್ದರು. ರಿಪಬ್ಲಿಕನ್ ನ್ಯಾಷನಲ್ ಕಮಿಟಿ (ಆರ್‌ಎನ್‌ಸಿ) ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದೆ.

ADVERTISEMENT

ವಿಡಿಯೋ ವೀಕ್ಷಿಸಿದ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವು ಟ್ವಿಟರ್ ಬಳಕೆದಾರರು ಬೈಡನ್ ಅವರನ್ನು ಅಪಹಾಸ್ಯ ಮಾಡಿದ್ದಾರೆ. ಮತ್ತೆ ಕೆಲವರು ಆರ್‌ಎನ್‌ಸಿ ರಿಸರ್ಚ್ ಅನ್ನು ದೂಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.