ADVERTISEMENT

‘ಮತದಾನ ಉತ್ತೇಜನ’ಕ್ಕೆ ಅಮೆರಿಕದ ನೆರವು ಸ್ಥಗಿತ

ಪಿಟಿಐ
Published 16 ಫೆಬ್ರುವರಿ 2025, 15:47 IST
Last Updated 16 ಫೆಬ್ರುವರಿ 2025, 15:47 IST
<div class="paragraphs"><p>ಎಲಾನ್‌ ಮಸ್ಕ್‌</p></div>

ಎಲಾನ್‌ ಮಸ್ಕ್‌

   

ರಾಯಿಟರ್ಸ್‌ ಚಿತ್ರ

ನ್ಯೂಯಾರ್ಕ್‌/ನವದೆಹಲಿ: ಉದ್ಯಮಿ ಎಲಾನ್‌ ಮಸ್ಕ್‌ ನೇತೃತ್ವದ ಅಮೆರಿಕದ ಸರ್ಕಾರಿ ದಕ್ಷತೆಯ ಇಲಾಖೆಯು ವೆಚ್ಚಗಳಲ್ಲಿ ಕಡಿತ ಮಾಡುವುದಾಗಿ ಘೋಷಿಸಿದೆ. ಇದರ ಭಾಗವಾಗಿ ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದ 21 ಮಿಲಿಯನ್ ಡಾಲರ್ (ಅಂದಾಜು ₹182 ಕೋಟಿ) ಅನುದಾನ ಕೂಡ ಸ್ಥಗಿತಗೊಂಡಿದೆ.

ADVERTISEMENT

ಆಡಳಿತದಲ್ಲಿ ದಕ್ಷತೆ ಹೆಚ್ಚಿಸುವುದು ಮತ್ತು ವ್ಯರ್ಥ ವೆಚ್ಚಗಳನ್ನು ತಗ್ಗಿಸುವುದು ಈ ಇಲಾಖೆಯ ಉದ್ದೇಶ. ಚುನಾವಣೆಗಳು ಮತ್ತು ರಾಜಕೀಯ ಪ್ರಕ್ರಿಯೆಗಳನ್ನು ಬಲಗೊಳಿಸುವ ಒಕ್ಕೂಟಕ್ಕೆ ನೀಡುತ್ತಿದ್ದ ₹4,212 ಕೋಟಿ ನೆರವನ್ನು ನಿಲ್ಲಿಸಲಾಗಿದೆ. ಭಾರತಕ್ಕೆ ನೀಡುತ್ತಿದ್ದ ₹182 ಕೋಟಿ ನೆರವು ಈ ನೆರವಿನ ಭಾಗವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ನಂತರ ಈ ತೀರ್ಮಾನ ಪ್ರಕಟವಾಗಿದೆ. ಮೋದಿ ಅವರು ಮಸ್ಕ್‌ ಅವರ ಜೊತೆಯೂ ಮಾತುಕತೆ ನಡೆಸಿದ್ದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ಶಕ್ತಿಗಳು ದೇಶದ ಸಂಸ್ಥೆಗಳ ಮೇಲೆ ಪ್ರಭಾವ ಬೀರುತ್ತಿದ್ದವು ಎಂಬ ಆರೋಪಕ್ಕೆ ಭಾರತದಲ್ಲಿ ಮತದಾನದ ಪ್ರಮಾಣ ಏರಿಕೆಗೆ ಸಂಬಂಧಿಸಿದಂತೆ ಅಮೆರಿಕದಿಂದ ದೇಣಿಗೆ ಪಡೆಯುತ್ತಿದ್ದ ಯೋಜನೆಯೊಂದು ಇಂಬು ಕೊಡುವಂತಿದೆ ಎಂದು ಬಿಜೆಪಿ ಆರೋಪಿಸಿದೆ.

‘ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ಶಕ್ತಿಗಳು – ಅಂದರೆ ಅವಕಾಶ ಸಿಕ್ಕಾಗಲೆಲ್ಲ ಭಾರತವನ್ನು ದುರ್ಬಲಗೊಳಿಸಲು ಯತ್ನಿಸುವವರು – ದೇಶದ ಸಂಸ್ಥೆಗಳ ಒಳಗೆ ನುಸುಳುವುದಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವು ವ್ಯವಸ್ಥಿತವಾಗಿ ಅವಕಾಶ ಮಾಡಿಕೊಟ್ಟಿತ್ತು ಎಂಬುದು ಈಗ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ’ ಎಂದು ಬಿಜೆಪಿಯ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಎಕ್ಸ್‌ ಮೂಲಕ ಹೇಳಿದ್ದಾರೆ.

‘ಅಮೆರಿಕದಲ್ಲಿ ನೆಲೆಯಾಗಿರುವ ಕೋಟ್ಯಧೀಶ, ಹೂಡಿಕೆದಾರ ಜಾರ್ಜ್‌ ಸೊರೋಸ್ ಅವರ ನೆರಳು ನಮ್ಮ ಚುನಾವಣಾ ಪ್ರಕ್ರಿಯೆಯ ಮೇಲೆ ಕಾಣುತ್ತಿದೆ. ಸೊರೋಸ್ ಅವರು ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬದ ಜೊತೆ ನಂಟು ಹೊಂದಿರುವ ವ್ಯಕ್ತಿ’ ಎಂದು ಮಾಳವೀಯ ಅವರು ಆರೋಪಿಸಿದ್ದಾರೆ.

ಬಿಜೆಪಿಯ ಆರೋಪ ಏನು?

ಚುನಾವಣಾ ಆಯೋಗವು 2012ರಲ್ಲಿ ‘ದಿ ಇಂಟರ್‌ನ್ಯಾಷನಲ್ ಫೌಂಡೇಷನ್ ಫಾರ್ ಎಲೆಕ್ಟೋರಲ್ ಸಿಸ್ಟಮ್ಸ್’ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಈ ಸಂಸ್ಥೆಯು ಸೊರೋಸ್ ಅವರ ‘ಓಪನ್ ಸೊಸೈಟಿ ಫೌಂಡೇಷನ್’ ಜೊತೆ ನಂಟು ಹೊಂದಿದೆ ಇದಕ್ಕೆ ಯುಎಸ್‌ಏಡ್‌ ಕಡೆಯಿಂದ ನೆರವು ಬರುತ್ತಿತ್ತು ಎಂದು ಮಾಳವೀಯ ಆರೋಪ ಮಾಡಿದ್ದಾರೆ.

ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಬಗ್ಗೆ ಒಳಗೊಳ್ಳುವಿಕೆ ಬಗ್ಗೆ ಪ್ರಶ್ನಿಸುವವರಿಗೆ ಇಡೀ ಕೇಂದ್ರ ಚುನಾವಣಾ ಆಯೋಗವನ್ನು ವಿದೇಶಿ ಶಕ್ತಿಗಳಿಗೆ ಹಸ್ತಾಂತರಿಸುವಲ್ಲಿ ಯಾವ ಹಿಂಜರಿಕೆಯೂ ಇರಲಿಲ್ಲ ಎಂದು ಮಾಳವೀಯ ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮತದಾನದ ಪ್ರಮಾಣ ಏರಿಕೆಗಾಗಿ 21 ಮಿಲಿಯನ್ ಡಾಲರ್ ಮೊತ್ತವೇ? ಇದು ಭಾರತದ ಚುನಾವಣಾ ಪ್ರಕ್ರಿಯೆಯ ಮೇಲೆ ವಿದೇಶಿ ಪ್ರಭಾವ ಖಂಡಿತವಾಗಿಯೂ ಹೌದು. ಇದರಿಂದ ಯಾರಿಗೆ ಲಾಭ? ಖಂಡಿತವಾಗಿಯೂ ಆಡಳಿತಾರೂಢ ಪಕ್ಷಕ್ಕೆ ಅಲ್ಲ’ ಎಂದು ಮಾಳವೀಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.