ADVERTISEMENT

ರಾಷ್ಟ್ರೀಯ ಸ್ವಾತಂತ್ರ್ಯ ದಿನ ಕಾಯ್ದೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸಹಿ

‘ಜೂನ್‌ಟೀನ್ತ್‌’ಗೆ ರಜೆ: ಕಪ್ಪು ವರ್ಣೀಯರ ಸಂಭ್ರಮ

ಏಜೆನ್ಸೀಸ್
Published 18 ಜೂನ್ 2021, 8:15 IST
Last Updated 18 ಜೂನ್ 2021, 8:15 IST
‘ಜೂನ್‌ಟೀನ್ತ್‌’ ರಾಷ್ಟ್ರೀಯ ಸ್ವಾತಂತ್ರ್ಯ ದಿನ ಕಾಯ್ದೆಗೆ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಾಕಿದ ಸಂದರ್ಭ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಇದ್ದರು     ಎಪಿ/ಪಿಟಿಐ ಚಿತ್ರ
‘ಜೂನ್‌ಟೀನ್ತ್‌’ ರಾಷ್ಟ್ರೀಯ ಸ್ವಾತಂತ್ರ್ಯ ದಿನ ಕಾಯ್ದೆಗೆ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಾಕಿದ ಸಂದರ್ಭ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಇದ್ದರು     ಎಪಿ/ಪಿಟಿಐ ಚಿತ್ರ   

ವಾಷಿಂಗ್ಟನ್‌: ಅಮೆರಿಕದಲ್ಲಿ ಗುಲಾಮಗಿರಿ ಅಂತ್ಯಗೊಳಿಸಿದ ನೆನಪಿಗಾಗಿ ಆಚರಿಸುವ ‘ಜೂನ್‌ಟೀನ್ತ್‌’ (ಜೂನ್‌ 19) ದಿನದಂದು ಅಧ್ಯಕ್ಷ ಜೋ ಬೈಡನ್‌ ಅವರು ರಜೆ ಘೋಷಿಸಿದ್ದನ್ನು ಕಪ್ಪು ವರ್ಣೀಯರು ಸ್ವಾಗತಿಸಿ, ಸಂಭ್ರಮಿಸಿದ್ದಾರೆ.

‘ಜೂನ್‌ಟೀನ್ತ್‌’ ರಾಷ್ಟ್ರೀಯ ಸ್ವಾತಂತ್ರ್ಯ ದಿನ ಕಾಯ್ದೆಗೆ ಜೋ ಬೈಡನ್‌ ಅವರು ಇದೇ 17ರಂದು ಸಹಿ ಹಾಕಿದ್ದರು.

‘ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಪ್ರಕರಣಗಳು ಹೆಚ್ಚುತ್ತಿರುವಾಗ ಈ ದಿನವನ್ನು ಗುರುತಿಸಲು ರಜೆ ಘೋಷಿಸಿರುವುದು ಶ್ಲಾಘನೀಯ. ಆದರೆ, ಇನ್ನೂ ಹಲವಾರು ನೀತಿಗಳಲ್ಲಿ ಬದಲಾವಣೆ ಮಾಡುವುದು ಅಗತ್ಯ ಇದೆ’ ಎಂದು ಹಲವು ಕಪ್ಪು ವರ್ಣೀಯರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಇದು ನಿಜಕ್ಕೂ ಅತ್ಯುತ್ತಮ ನಿರ್ಧಾರ. ಹಲವು ದಿನಗಳ ಬೇಡಿಕೆಯಾಗಿತ್ತು. ಆದರೆ, ಇಷ್ಟಕ್ಕೆ ಸೀಮಿತವಾಗಬಾರದು. ಬದಲಾವಣೆ ತರುವ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ನಮ್ಮ ಮತದಾನದ ಹಕ್ಕನ್ನು ರಕ್ಷಿಸಬೇಕಾಗಿದೆ’ ಎಂದು ಕನ್ಸಾಸ್‌ ನಗರದ ‘ಅರ್ಬನ್‌ ಲೀಗ್‌’ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ವೆನ್‌ ಗ್ರ್ಯಾಂಟ್‌ ಹೇಳಿದ್ದಾರೆ.

ಪ‍್ರತಿ ವರ್ಷ ಜೂನ್‌ 19ರಂದು ಗುಲಾಮಗಿರಿ ಅಂತ್ಯಗೊಳಿಸಿರುವ ದಿನವನ್ನು ಅಮೆರಿಕದಲ್ಲಿ ಆಚರಿಸಲಾಗುತ್ತಿದೆ. 1865ರ ಜೂನ್‌ 19ರಂದು ಕಪ್ಪು ವರ್ಣೀಯರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುವುದನ್ನು ಟೆಕ್ಸಾಸ್‌ನ ಗಾಲ್ವೆಸ್ಟಾನ್‌ನಲ್ಲಿ ಘೋಷಿಸಲಾಗಿತ್ತು. ಟೆಕ್ಸಾಸ್‌ನಲ್ಲಿ 1980ರಿಂದಲೇ ಜೂನ್‌ 19ರಂದು ರಜೆ ಘೋಷಿಸಲಾಗಿದೆ. ರಜೆ ಘೋಷಿಸಿದ ಮೊದಲ ರಾಜ್ಯ ಇದಾಗಿದೆ.

‘ಈ ದಿನ ಕೇವಲ ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳಲು ಸೀಮಿತವಾಗಿಲ್ಲ. ಬದಲಾವಣೆಯ ಕ್ರಮಗಳ ಅಗತ್ಯವನ್ನು ಸಹ ಬಯಸುತ್ತದೆ’ ಎಂದು ಜೋ ಬೈಡನ್‌ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಸೆನೆಟ್‌ ಸರ್ವಾನುಮತದಿಂದ ರಜೆಗೆ ಸಂಬಂಧಿಸಿದ ಮಸೂದೆಗೆ ಅನುಮೋದನೆ ನೀಡಿತ್ತು. ಆದರೆ, ಜನಪ್ರತಿನಿಧಿಗಳ ಸಭೆಯಲ್ಲಿ ಈ ಮಸೂದೆ ವಿರುದ್ಧ 14 ರಿಪಬ್ಲಿಕನ್‌ ಸದಸ್ಯರು ಮತ ಚಲಾಯಿಸಿದ್ದರು.

‘ರಜೆ’ ಹೆಸರಿನಲ್ಲಿ ‘ಸ್ವಾತಂತ್ರ್ಯ’ ಶಬ್ದ ಬಳಕೆ ಮಾಡಲಾಗುತ್ತಿದೆ ಎಂದು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದ ರಿಪಬ್ಲಿಕನ್‌ ಪಕ್ಷದ ಚಿಪ್‌ ರಾಯ್‌ ಹೇಳಿದ್ದರು.

‘ಎಲ್ಲರನ್ನೂ ಒಗ್ಗೂಡಿಸುವ ಬದಲು ಈ ಹೆಸರು ನಮ್ಮ ದೇಶವನ್ನು ವಿಭಜಿಸುತ್ತದೆ. ವ್ಯಕ್ತಿಗಳ ಚರ್ಮದ ಬಣ್ಣದ ಆಧಾರದ ಮೇಲೆ ಪ್ರತ್ಯೇಕ ಸ್ವಾತಂತ್ರ್ಯ ದಿನಾಚರಣೆ ಮಾಡುವುದರಿಂದ ವಿಭಜನೆಗೆ ಕಾರಣವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.