ADVERTISEMENT

ಕೋವ್ಯಾಕ್ಸಿನ್‌ ಖರೀದಿಗಿತ್ತು ಒತ್ತಡ: ಬ್ರೆಜಿಲ್‌ ಆರೋಗ್ಯ ಇಲಾಖೆ ಆಧಿಕಾರಿ

ರಾಯಿಟರ್ಸ್
Published 24 ಜೂನ್ 2021, 7:24 IST
Last Updated 24 ಜೂನ್ 2021, 7:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬ್ರೆಸಿಲಿಯಾ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್‌ 19 ಲಸಿಕೆ ಖರೀದಿಸಲು ಎದುರಿಸುತ್ತಿರುವ ಆಂತರಿಕ ಒತ್ತಡದ ಬಗ್ಗೆ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರನ್ನು ಎಚ್ಚರಿಸಿದ್ದಾಗಿ ಬ್ರೆಜಿಲ್ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಸರ್ಕಾರದ ಕೋವಿಡ್‌ ನಿರ್ವಹಣೆ ಕುರಿತು ತನಿಖೆ ನಡೆಸುತ್ತಿರುವ ಸೆನೆಟ್ ಸಮಿತಿಯು ಬುಧವಾರ ಲಾಜಿಸ್ಟಿಕ್ಸ್ ವಿಭಾಗದ ಅಧಿಕಾರಿ ಲೂಯಿಸ್ ರಿಕಾರ್ಡೊ ಮಿರಾಂಡಾ ಅವರನ್ನು ವಿಚಾರಣೆಗೆ ಕರೆದಿತ್ತು. ಬೋಲ್ಸನಾರೊ ಅವರ ಆಪ್ತರಲ್ಲಿ ಒಬ್ಬರಾದ ಮಾಜಿ ಆರೋಗ್ಯ ಸಚಿವ ಎಡ್ವರ್ಡೊ ಪಜುಯೆಲ್ಲೊ ಅವರ ಸಹಾಯಕರಾದ ಅಲೆಕ್ಸ್ ಲಿಯಾಲ್ ಮರಿನ್ಹೋ ಅವರು ಕೋವ್ಯಾಕ್ಸಿನ್‌ ಖರೀದಿಗಾಗಿ ಒತ್ತಡ ಹೇರುತ್ತಿದ್ದರು ಎಂದು ಮಿರಾಂಡಾ ಅವರು ಸಮಿತಿಯ ಎದುರು ತಿಳಿಸಿದ್ದಾರೆ.

ಕಳೆದ ವರ್ಷ ಫೈಜರ್‌ನಿಂದ ಬಂದಿದ್ದ ಆರಂಭಿಕ ಪ್ರಸ್ತಾವನೆಯನ್ನು ನಿರ್ಲಕ್ಷಿಸಿ ಭಾರತದಿಂದ ದುಬಾರಿ ಬೆಲೆಗೆ ಲಸಿಕೆಗಳನ್ನು ಖರೀದಿಸುವ ಒಪ್ಪಂದವನ್ನು ಗೌಪ್ಯವಾಗಿ ಮಾಡಿಕೊಳ್ಳಲು ಸರ್ಕಾರ ಏಕೆ ಪ್ರಯತ್ನಿಸಿತು ಎಂಬುದರ ನಿಟ್ಟಿನಲ್ಲಿ ಸೆನೆಟ್ ಸಮಿತಿ ತನಿಖೆ ನಡೆಸುತ್ತಿದೆ. ‌

ADVERTISEMENT

ಮಿರಾಂಡಾ ಅವರ ಹೇಳಿಕೆ ಬುಧವಾರ ‘ಒ ಗ್ಲೋಬೊ‘ ಪತ್ರಿಕೆಯಲ್ಲಿ ಮೊದಲ ಬಾರಿಗೆ ವರದಿಯಾಗಿತ್ತು. ತಮಗಿರುವ ಒತ್ತಡದ ಬಗ್ಗೆ ಅವರು ದಾಖಲೆಗಳ ಸಹಿತ ಬೋಲ್ಸನಾರೊಗೆ ಮಾರ್ಚ್ 20 ರಂದು ತಿಳಿಸಿದ್ದರು. ಅವರು ಕೂಡಲೇ ಪೊಲೀಸರಿಗೆ ಈ ವಿಷಯ ತಿಳಿಸುವುದಾಗಿ ಹೇಳಿದ್ದರು.

ಇದು ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ಸ್ಪಷ್ಟ ಪ್ರಯತ್ನ ಎಂದು ಬ್ರೆಜಿಲ್‌ ಸಂಸದರೊಬ್ಬರು ಹೇಳಿದ್ದಾರೆ.

ಒತ್ತಡ ಹೇರುತ್ತಿದ್ದರು ಎನ್ನಲಾದ ಆರೋಗ್ಯ ಇಲಾಖೆಯ ಅಧಿಕಾರಿ ಮರಿನ್ಹೋ ಅವರನ್ನು ಸಂದರ್ಶಿಸುವ ಸುದ್ದಿ ಸಂಸ್ಥೆ ರಾಯಿಟರ್ಸ್‌ ಮನವಿಗೆ ಆರೋಗ್ಯ ಸಚಿವಾಲಯ ತಕ್ಷಣಕ್ಕೆ ಸ್ಪಂದಿಸಿಲ್ಲ. ಮರಿನ್ಹೋ ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸಲೂ ಸಾಧ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.