ADVERTISEMENT

ಶಿಕ್ಷಣ ಕಾರ್ಯಕರ್ತ ವೆಸಾ ಬಿಡುಗಡೆಗಾಗಿ ತಾಲಿಬಾನ್ ಮೇಲೆ ಹೆಚ್ಚಿದ ಒತ್ತಡ

ಏಜೆನ್ಸೀಸ್
Published 29 ಮಾರ್ಚ್ 2023, 13:17 IST
Last Updated 29 ಮಾರ್ಚ್ 2023, 13:17 IST
ಮತಿವುಲ್ಲಾ ವೆಸಾ –ಎಎಫ್‌ಪಿ ಚಿತ್ರ 
ಮತಿವುಲ್ಲಾ ವೆಸಾ –ಎಎಫ್‌ಪಿ ಚಿತ್ರ    

ಇಸ್ಲಾಮಾಬಾದ್: ಕಾಬೂಲ್‌ನಲ್ಲಿ ಈ ವಾರ ಬಂಧನಕ್ಕೊಳಗಾಗಿರುವ ‘ಪೆನ್‌ಪಾತ್’ ಸಂಸ್ಥಾಪಕ ಹಾಗೂ ಹೆಣ್ಣುಮಕ್ಕಳ ಶಿಕ್ಷಣದ ಸಾಮಾಜಿಕ ಕಾರ್ಯಕರ್ತ ಮತಿವುಲ್ಲಾ ವೆಸಾ ಅವರ ಬಿಡುಗಡೆಗೆ ಒತ್ತಾಯಿಸಿ ತಾಲಿಬಾನ್‌ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

‍‘ಪೆನ್‌ಪಾತ್’ಎನ್ನುವ ಸರ್ಕಾರೇತರ ಸಂಸ್ಥೆಯ ಮೂಲಕ ಅಫ್ಗಾನಿಸ್ತಾನದಾದ್ಯಂತ ಮೊಬೈಲ್ ಶಾಲೆ ಹಾಗೂ ಗ್ರಂಥಾಲಯ ನಡೆಸುತ್ತಿರುವ ಮತಿಯುಲ್ಲಾ ಅವರನ್ನು ಸೋಮವಾರ ಕಾಬೂಲ್‌ನಲ್ಲಿ ಬಂಧಿಸಲಾಗಿದೆ.

ಯುರೋಪ್ ಪ್ರವಾಸದಿಂದ ವಾಪಸಾದ ಮತಿವುಲ್ಲಾ ಅವರನ್ನು ತಾಲಿಬಾನ್ ಭದ್ರತಾ ಪಡೆಗಳು ಬಂಧಿಸಿವೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಆದರೆ, ತಾಲಿಬಾನ್ ಅಧಿಕಾರಿಗಳು ಅವರ ಬಂಧನವನ್ನು ದೃಢಪಡಿಸಿಲ್ಲ. ಅವರ ಬಂಧನಕ್ಕೆ ಕಾರಣಗಳು ಹಾಗೂ ಅವರನ್ನು ಎಲ್ಲಿ ಇರಿಸಲಾಗಿದೆ ಎನ್ನುವ ವಿಷಯವನ್ನು ತಿಳಿಸಿಲ್ಲ.

ADVERTISEMENT

ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯದ ಪ್ರಕಟಣೆಗಳ ನಿರ್ದೇಶಕ ಅಬ್ದುಲ್ ಹಕ್ ಹುಮಾದ್ ಅವರು ಮತಿವುಲ್ಲಾ ಅವರನ್ನು ಬಂಧನವನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದಾರೆ. ‘ಮತಿವುಲ್ಲಾ ಅವರ ಕ್ರಮಗಳು ಅನುಮಾನಕ್ಕೆ ಆಸ್ಪದ ಕೊಡುವಂತಿವೆ. ಅಂಥವರಿಂದ ವಿವರಣೆಯನ್ನು ಕೇಳುವ ಅಧಿಕಾರ ವ್ಯವಸ್ಥೆಗೆ ಇದೆ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ತಾಲಿಬಾನ್ ಪಡೆಗಳು ಮತಿವುಲ್ಲಾ ಅವರ ಕುಟುಂಬ ವಾಸವಿರುವ ಮನೆಯನ್ನು ಸುತ್ತುವರಿದಿವೆ. ಕುಟುಂಬd ಸದಸ್ಯರನ್ನು ಥಳಿಸಲಾಗಿದೆ’ ಎಂದೂ ಮತಿವುಲ್ಲಾ ಅವರ ಸಹೋದರ ಹೇಳಿದ್ದಾರೆ.

ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ, ಅಘ್ಗಾನಿಸ್ತಾನದ ವ್ಯವಹಾರಗಳ ಕುರಿತ ಅಮೆರಿಕದ ವಕ್ತಾರ, ಕರೆನ್ ಡೆಕ್ಕರ್ ಅವರು ಸೇರಿದಂತೆ ಅನೇಕರು ಮತಿವುಲ್ಲಾ ಅವರ ಬಂಧನವನ್ನು ಖಂಡಿಸಿದ್ದಾರೆ. ಅವರ ಬಿಡುಗಡೆಗೆ ಆಗ್ರಹಿಸಿ ಕಾರ್ಯಕರ್ತರು ಹ್ಯಾಷ್‌ಟ್ಯಾಗ್ ರಚಿಸಿ ಅನೇಕ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾರೆ.

ಅಫ್ಗಾನಿಸ್ತಾನವನ್ನು ತಮ್ಮ ಸ್ವಾಧೀನಪಡಿಸಿಕೊಂಡ ಬಳಿಕ ತಾಲಿಬಾನ್, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ನಿಷೇಧ ಹೇರಿದೆ. ಆರನೇ ತರಗತಿಯ ನಂತರ ಹೆಣ್ಣುಮಕ್ಕಳು ಶಿಕ್ಷಣ ಮುಂದುವರಿಸುವಂತಿಲ್ಲ. ಅಷ್ಟೇ ಅಲ್ಲ, ಮಹಿಳೆಯರು ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಹಕ್ಕನ್ನೂ ತಾಲಿಬಾನ್ ಕಳೆದ ವರ್ಷ ಮೊಟಕುಗೊಳಿಸಿದೆ.

ಮತಿವುಲ್ಲಾ ಅವರು ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗಲು ಮತ್ತು ಕಲಿಯುವ ಹಕ್ಕನ್ನು ಹೊಂದಿರಬೇಕು ಎನ್ನುವ ಕುರಿತು ಅನೇಕ ಬಾರಿ ಬಹಿರಂಗವಾಗಿ ಮಾತನಾಡಿದ್ದಾರೆ. ತಾಲಿಬಾನ್ ನೇತೃತ್ವದ ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಹೇರಿರುವ ನಿಷೇಧಗಳನ್ನು ಹಿಂತೆಗೆದುಕೊಳ್ಳುವಂತೆ ಪದೇ ಪದೇ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.