ಸ್ಯಾನ್ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲತಾಣದ ಅತಿ ದೊಡ್ಡ ನೆಟ್‌ವರ್ಕ್ ಫೇಸ್‌ಬುಕ್ ಖಾಸಗಿತನ ಕಾಪಾಡುವಲ್ಲಿ ಹಾಗೂ ಗೋಪ್ಯತೆ ಉಳಿಸಿಕೊಳ್ಳುವಲ್ಲಿ ಸೋತ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್, ‘ವೈಯಕ್ತಿಕ ವಿವರ ಕಾಪಾಡುವ ಹಾಗೂ ಖಾಸಗಿತನಕ್ಕೆ ಹೆಚ್ಚು ಒತ್ತು ನೀಡುವಲ್ಲಿ ಫೇಸ್‌ಬುಕ್ ಇನ್ನು ಮುಂದೆ ಗಮನಹರಿಸಲಿದೆ’ ಎಂದಿದ್ದಾರೆ.
ಸಂದೇಶ ರವಾನೆಯಲ್ಲಿ (ಮೆಸೆಂಜರ್ ಬಳಕೆ) ಗೌಪ್ಯತೆ ಕಾಪಾಡುವುದರ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತಿರುವ ಫೇಸ್‌ಬುಕ್ ಎನ್‌ಕ್ರಿಪ್ಟಡ್ ಸಂದೇಶ ರವಾನೆ ಸೇವೆಯತ್ತ ಗಮನಹರಿಸಲಿದೆ. ಫೇಸ್‌ಬುಕ್ ಆಗಲಿ, ಹೊರಗಿನವರಾಗಲಿ ಯಾವುದೇ ಬಳಕೆದಾರರ ಖಾಸಗಿ ಸಂದೇಶಗಳನ್ನು ಹ್ಯಾಕ್ ಮಾಡಿ ನೋಡಲು ಸಾಧ್ಯವಾಗದಂತೆ ಗೋಪ್ಯತೆ ಕಾಪಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ತಾನಾಗೆ ಸಂದೇಶಗಳು ಡಿಲೀಟ್ ಆಗುವಂಥ ವಿಶೇಷ ಮಾದರಿ ಸಂದೇಶ ರವಾನೆ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತಿದ್ದು, ಇದರಿಂದ ಖಾಸಗಿ ಸಂದೇಶಗಳು ಹ್ಯಾಕ್ ಆಗುವುದನ್ನು ತಡೆಯಬಹುದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯ ನೆಟ್‌ವರ್ಕ್ ಆಗಿದ್ದರೂ ಖಾಸಗಿತನ ಕಾಪಾಡುವ ಹಾಗೂ ಸುರಕ್ಷಿತ ಮೆಸೆಂಜರ್ ಅಪ್ಲಿಕೇಷನ್ ಇದಲ್ಲ ಎಂಬ ಆರೋಪಕ್ಕೆ ಹೊಸ ಮೆಸೇಜಿಂಗ್ ಆ್ಯಪ್ ಅಭಿವೃದ್ಧಿಪಡಿಸಲಿದ್ದಾರೆ. ಏಷ್ಯಾದಲ್ಲಿ ಜನಪ್ರಿಯವಾಗಿರುವ ‘ವೀಚಾಟ್’ ನಂಥ ಆ್ಯಪ್ ಅನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.
ಹೊಸಯೋಜನೆಯಿಂದ ಮೆಸೆಂಜರ್ ಖಾತೆ ಇರುವರು ವಾಟ್ಸ್‌ಆ್ಯಪ್ ಬಳಕೆದಾರರೊಂದಿಗೆ ಹಾಗೂ ವಾಟ್ಸ್‌ಆ್ಯಪ್ ಬಳಕೆದಾರರು ಮೆಸೆಂಜರ್ ಬಳಕೆದಾರರೊಂದಿಗೆ ಸಂವಹನ ನಡೆಸಬಹುದು. ಜೊತೆಗೆ ಬಳಕೆದಾರರು ತಮ್ಮ ಸಂವಹನವನ್ನು (ಚಾಟ್ಸ್) ಎಷ್ಟು ಸಮಯ ಉಳಿಸಿಕೊಳ್ಳಬೇಕೆಂಬ ಬಗ್ಗೆಯೂ ನಿರ್ಧರಿಸಬಹುದು. ನಿಗದಿತ ಸಮಯವಾದ ನಂತರ ಸಂದೇಶ ಡಿಲೀಟ್ ಆಗುತ್ತವೆ.
‘ಮೆಸೆಂಜರ್ ಬಳಕೆದಾರರು ತಮ್ಮ ಸಂವಹನ ಖಾಸಗಿಯಾಗಿ, ಸುರಕ್ಷಿತವಾಗಿರಬೇಕು ಎಂದು ಬಯಸುತ್ತಾರೆ ಹೊರತು ಹೆಚ್ಚು ಸಮಯ ಸಂವಹನ (ಚಾಟ್) ಉಳಿಸಿಕೊಳ್ಳಲು ಬಯಸುವುದಿಲ್ಲ’ ಎಂಬ ಅಭಿಪ್ರಾಯವನ್ನೂ ಸಹ ಜುಕರ್‌ಬರ್ಗ್ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.