ADVERTISEMENT

ಭಾರತದ ಜೊತೆ ಬಾಂಧವ್ಯ ಗಟ್ಟಿಗೊಳಿಸಲು ಬದ್ಧ: ಕೆನಡಾ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 14:28 IST
Last Updated 29 ಸೆಪ್ಟೆಂಬರ್ 2023, 14:28 IST
<div class="paragraphs"><p>ಕೆನಡಾ ಮತ್ತು ಭಾರತದ ಧ್ವಜ</p></div>

ಕೆನಡಾ ಮತ್ತು ಭಾರತದ ಧ್ವಜ

   

ಐಸ್ಟಾಕ್ ಚಿತ್ರ

ಟೊರಂಟೊ: ಭಾರತವು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ದೇಶವಾಗಿದ್ದು, ಆ ದೇಶದ ಜೊತೆ ಉತ್ತಮ ಬಾಂಧವ್ಯ ಹೊಂದುವುದನ್ನು ಕೆನಡಾ ಗಂಭೀರವಾಗಿ ಪರಿಗಣಿಸಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ಹೇಳಿದ್ದಾರೆ.

ADVERTISEMENT

ಹರದೀಪ್ ಸಿಂಗ್ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದ ಸತ್ಯಾಂಶಗಳು ಹೊರಬರುವವರೆಗೂ ಕೆನಡಾಕ್ಕೆ ಭಾರತ ಸಹಕಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ ಎಂದು ಅಲ್ಲಿಯ ನ್ಯಾಷನಲ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ.

ಖಾಲಿಸ್ತಾನ ಪರ ಹೋರಾಟಗಾದ ನಿಜ್ಜರ್‌ ಹತ್ಯೆಯ ನಂತರ ಭಾರತ–ಕೆನಡಾ ಸಂಬಂಧದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಟ್ರೂಡೊ ಅವರು ಮಾಂಟ್ರಿಯಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

‘ಜಾಗತಿಕವಾಗಿ ಭಾರತದ ಮಹತ್ವ ಹೆಚ್ಚುತ್ತಿದೆ. ಹಾಗಾಗಿ ಆ ದೇಶದ ಜೊತೆ ರಚನಾತ್ಮಕವಾಗಿ ತೊಡಗಿಕೊಳ್ಳುವುದು ಕೆನಡಾಕ್ಕೆ ಮುಖ್ಯವಾಗಿದೆ. ಕಳೆದ ವರ್ಷವಷ್ಟೇ ಕೆನಡಾವು ಹಿಂದೂ ಮಹಾಸಾಗರ– ಪೆಸಿಫಿಕ್‌ ಕಾರ್ಯತಂತ್ರದ ಭಾಗವಾಗಿದೆ. ಹೀಗಾಗಿ ಭಾರತದ ಜೊತೆ ಉತ್ತಮ ಬಾಂಧವ್ಯ ಸ್ಥಾಪಿಸುವುದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದಿದ್ದಾರೆ.

‘ನಿಜ್ಜರ್‌ ಹತ್ಯೆಯಲ್ಲಿ ಭಾರತ ಏಜೆಂಟರ ಕೈವಾಡವಿದೆ ಎಂದು ಗುಪ್ತಚರ ಸಂಸ್ಥೆಗಳು ಮಾಡಿರುವ ಆರೋಪಗಳನ್ನು ಪರಿಶೀಲಿಸಲು ಭಾರತದ ಸಹಕಾರ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಆ ದೇಶಕ್ಕೆ ಮನಗಾಣಿಸುವ ವಿಚಾರದಲ್ಲಿ ಅಮೆರಿಕವು ಕೆನಡಾದ ಜೊತೆ ಇದೆ’ ಎಂದಿದ್ದಾರೆ.

‘ನಮ್ಮ ಎಲ್ಲಾ ಸಹಭಾಗಿ ದೇಶಗಳೊಡನೆ ನಾವು ಕಾನೂನಿಗೆ ಬದ್ಧವಾಗಿ ಜವಾಬ್ದಾರಿಯುತವಾಗಿ ಹೆಜ್ಜೆ ಇಡುತ್ತಿದ್ದೇವೆ. ಭಾರತದ ಜೊತೆಯೂ ನಾವು ಅದೇ ರೀತಿ ನಡೆದುಕೊಳ್ಳುತ್ತಿದ್ದೇವೆ’ ಎಂದು ಟ್ರೂಡೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.