ADVERTISEMENT

ಭಾರತಕ್ಕೆ ₹ 7447 ಕೋಟಿ ಆರ್ಥಿಕ ನೆರವು: ಕೆನಡಾ ಪ್ರಧಾನಿ ಟ್ರುಡೊ ಪ್ರಕಟ

ಕೋವಿಡ್‌ ವಿರುದ್ಧದ ಹೋರಾಟಕ್ಕೆ ನೆರವು; ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ಮಾತುಕತೆ

ಪಿಟಿಐ
Published 28 ಏಪ್ರಿಲ್ 2021, 8:34 IST
Last Updated 28 ಏಪ್ರಿಲ್ 2021, 8:34 IST
ಜಸ್ಟಿನ್ ಟ್ರುಡೊ
ಜಸ್ಟಿನ್ ಟ್ರುಡೊ   

ಒಟ್ಟಾವ (ಕೆನಡಾ): ಕೋವಿಡ್‌ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ₹7447.10 ಕೋಟಿ (10 ದಶಲಕ್ಷ ಡಾಲರ್‌) ನೆರವು ನೀಡಲು ಸಿದ್ಧವಿರುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಪ್ರಕಟಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಥಿಕ ನೆರವಿನ ಜತೆಗೆ, ಹೆಚ್ಚುವರಿ ವೈದ್ಯಕೀಯ ಸೌಲಭ್ಯಗಳನ್ನು ಪೂರೈಸುವುದು ಸೇರಿದಂತೆ ಯಾವುದೇ ರೀತಿಯಲ್ಲಿ ಭಾರತಕ್ಕೆ ನೆರವಾಗಲು ಸಿದ್ಧರಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವ ಮಾರ್ಕ್ ಗರ್ನೇವು ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ‘ ಎಂದು ಹೇಳಿದರು.

‘ನಾವು ಕೆನಡಿಯನ್ ರೆಡ್‌ ಕ್ರಾಸ್‌ ಸಂಸ್ಥೆ ಮೂಲಕ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಗೆ ಈಗ ₹7447.10 ಕೋಟಿ ಹಣವನ್ನು ನೀಡಲು ಸಿದ್ಧರಿದ್ದೇವೆ. ಈ ಹಣ ಆಂಬುಲೆನ್ಸ್ ಸೇವೆಗಳು ಮತ್ತು ಸ್ಥಳೀಯವಾಗಿ ಪಿಪಿಇ ಕಿಟ್ ಖರೀದಿ ಸೇರಿದಂತೆ ಎಲ್ಲ ರೀತಿಯ ವೆಚ್ಚಗಳಿಗೂ ನೆರವಾಗುತ್ತದೆ‘ ಎಂದು ಅವರು ತಿಳಿಸಿದರು.

ADVERTISEMENT

‘ನೀವು ತುರ್ತು ಸಂದರ್ಭಗಳಿಗೆ ನೆರವಾಗುವುದಕ್ಕಾಗಿಯೇ ದೇಣಿಗೆ ನೀಡಲು ಬಯಸುವುದಾದರೆ www.redcross.ca ಜಾಲತಾಣಕ್ಕೆ ಭೇಟಿ ನೀಡಿ, ಮಾಹಿತಿ ಪಡೆಯಬಹುದು. ನಾವು ವಿಶ್ವವ್ಯಾಪಿ ಹೋರಾಟದಲ್ಲಿ ಕೈ ಜೋಡಿಸಿದ್ದೇವೆ‘ ಎಂದು ಟ್ರುಡೊ ಹೇಳಿದರು.

ಇದೇ ವೇಳೆ ಉಭಯ ದೇಶಗಳ ನಡುವಿನ ವಿದೇಶಾಂಗ ವ್ಯವಹಾರಗಳ ಸಚಿವರ ಮಾತುಕತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ರೀತಿಯ ಮಾತುಕತೆಗಳು ನಡೆಯುತ್ತಿರುತ್ತವೆ. ನಾವು ಎಲ್ಲ ರೀತಿಯಲ್ಲಿ ಬೆಂಬಲಿಸಲು ಸಿದ್ಧರಿದ್ದೇವೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.