ADVERTISEMENT

ಅಮೆರಿಕದ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್‌ ಹತ್ಯೆ: ಶಂಕಿತನ ಸೆರೆ

ರಾಯಿಟರ್ಸ್
Published 13 ಸೆಪ್ಟೆಂಬರ್ 2025, 0:30 IST
Last Updated 13 ಸೆಪ್ಟೆಂಬರ್ 2025, 0:30 IST
<div class="paragraphs"><p>ಚಾರ್ಲಿ&nbsp;ಕಿರ್ಕ್‌</p></div>

ಚಾರ್ಲಿ ಕಿರ್ಕ್‌

   

ಒರೆಮ್‌, ಉತಾಹ್‌/ ವಾಷಿಂಗ್ಟನ್‌: ಅಮೆರಿಕದ ಪ್ರಮುಖ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್‌ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಶಂಕಿತ ಆರೋಪಿ ಟೈಲರ್‌ ರಾಬಿನ್‌ಸನ್‌ (22) ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

‘ಅವನ ಹತ್ತಿರದವರು ನೀಡಿದ ಸುಳಿವು ಆಧರಿಸಿ ಬಂಧಿಸಲಾಗಿದೆ’ ಎಂದು ಟ್ರಂಪ್‌ ಅವರು ಫಾಕ್ಸ್‌ ನ್ಯೂಸ್‌ಗೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದ ಉತಾಹ್ ರಾಜ್ಯಪಾಲ ಸ್ಪೆನ್ಸರ್‌ ಕಾಕ್ಸ್‌ ಹಾಗೂ ಎಫ್‌ಬಿಐ ನಿರ್ದೇಶಕ ಕಾಶ್‌ ಪಟೇಲ್‌, ‘ಕಿರ್ಕ್‌ ಅವರನ್ನು ಕೊಂದ ಯುವಕನನ್ನು ಪತ್ತೆ ಮಾಡಲು ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದ್ದರು.

ಕೊಲೆಗಾರನ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ಡಾಲರ್‌ ಬಹುಮಾನ ನೀಡುವುದಾಗಿ ಎಫ್‌ಬಿಐ ಘೋಷಿಸಿತ್ತು.

ಒರೆಮ್‌ ನಗರದ ಉತಾಹ್‌ ವ್ಯಾಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ‘ದಿ ಅಮೆರಿಕನ್ ಕಮ್‌ಬ್ಯಾಕ್ ಟೂರ್‌’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 3 ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಟೆಂಟ್ ರೀತಿಯ ವೇದಿಕೆಯಲ್ಲಿ ಕೂತ್ತಿದ್ದ ಚಾರ್ಲಿ ಕಿರ್ಕ್ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದರು. ಮಧ್ಯಾಹ್ನ 12.20ರ ವೇಳೆ ಅವರು ಅಮೆರಿಕದಲ್ಲಿ ಮಾಸ್ ಶೂಟಿಂಗ್ ಬಗ್ಗೆ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು. ಆಗ ಕಟ್ಟಡದ ಚಾವಣಿಯಿಂದ ಕಿರ್ಕ್‌ ಕಡೆಗೆ ಗುಂಡು ಹಾರಿದ್ದು, ಕಿರ್ಕ್‌ ಅವರ ಕುತ್ತಿಗೆ ಭಾಗಕ್ಕೆ ತಗುಲಿ ತೀವ್ರ ರಕ್ತಸ್ರಾವವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಅಸುನೀಗಿದ್ದರು.

‌31 ವರ್ಷದ ಕಿರ್ಕ್, ಅಮೆರಿಕದ ಅತ್ಯಂತ ಪ್ರಮುಖ ಬಲಪಂಥೀಯ ಯುವ ಸಂಘಟನೆ ‘ಟರ್ನಿಂಗ್ ಪಾಯಿಂಟ್‌’ನ ಸ್ಥಾಪಕರಾಗಿದ್ದರು. ಬಲಪಂಥೀಯ ವಿಚಾರಗಳನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರು. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಪರ ಯುವ ಅಲೆ ಎದ್ದೇಳಲು ಕಿರ್ಕ್ ಪ್ರಮುಖ ಕಾರಣ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.