ADVERTISEMENT

ಉಗಾಂಡ; ಭಾರಿ ಮಳೆಯಿಂದ ಭೂಕುಸಿತ- ಮಹಿಳೆಯರು, ಮಕ್ಕಳು ಸೇರಿ 15 ಮಂದಿ ಸಾವು

ಪಿಟಿಐ
Published 7 ಸೆಪ್ಟೆಂಬರ್ 2022, 15:26 IST
Last Updated 7 ಸೆಪ್ಟೆಂಬರ್ 2022, 15:26 IST
   

ಕಂಪಾಲ: ಭಾರೀ ಮಳೆಯಿಂದ ಉಗಾಂಡದ ಪಶ್ಚಿಮ ಭಾಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬಹುತೇಕ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 15 ಮಂದಿ ಸಾವಿಗೀಡಾಗಿದ್ದಾರೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಗಡಿಯಲ್ಲಿರುವ ಕಾಸೆಸೆ ಪಟ್ಟಣದಲ್ಲಿ ಸಂಭವಿಸಿದ ದುರಂತದಲ್ಲಿ ಕಾಣೆಯಾದವರ ಸಂಖ್ಯೆ ಲೆಕ್ಕಕ್ಕೆ ಸಿಕ್ಕಿಲ್ಲ. ಹಲವು ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.

‘ಮೃತ 15 ಜನರ ಪೈಕಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು’ಎಂದು ರೆಡ್ ಕ್ರಾಸ್ ವಕ್ತಾರೆ ಇರೆನ್ ನಕಾಸೀತಾ ಮಾಧ್ಯಮಗಳಿಗೆ ತಿಳಿಸಿದ್ಧಾರೆ. ರಕ್ಷಣಾ ಕಾರ್ಯಾಚರಣೆ ತಂಡವು ಸ್ಥಳದಲ್ಲೇ ಮೊಕ್ಕಾಂ ಹೂಡಿದೆ.

ADVERTISEMENT

ನಾಪತ್ತೆಯಾದವರ ಸಂಖ್ಯೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. 6 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಕಾಸೀತಾ ಹೇಳಿದ್ದಾರೆ.

ಬಿದ್ದ ಮನೆಗಳ ಅವಶೇಷಗಳಡಿ ಸಿಲುಕಿರುವ ಮೃತದೇಹಗಳು, ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಶವ ಮುಂತಾದ ಘೋರ ದುರಂತದ ಚಿತ್ರಗಳನ್ನು ರೆಡ್‌ಕ್ರಾಸ್ ಹಂಚಿಕೊಂಡಿದೆ.

ಕಾಸೆಸೆ ಪಟ್ಟಣದ ನೆರೆ ಜಿಲ್ಲೆ ಬುಂಡಿಬುಗ್ಯೊದಲ್ಲಿ ಬಿದ್ದ ಭಾರಿ ಮಳೆಯಲ್ಲಿ ಶುಕ್ರವಾರ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಜುಲೈ ಅಂತ್ಯದಲ್ಲಿ ಪೂರ್ವ ಉಗಾಂಡದ ಬಲೆ ಪಟ್ಟಣದಲ್ಲಿ ಸಂಭವಿಸಿದ ಪ್ರವಾಹದಲ್ಲಿ 22 ಮಂದಿ ಸಾವಿಗೀಡಾಗಿದ್ದರು. ನೂರಾರು ಮಂದಿ ಮನೆ ಕಳೆದುಕೊಂಡಿದ್ದರು.

2020ರಲ್ಲಿ ಕಾಸೆಸೆಯಲ್ಲಿ ಭಾರಿ ಮಳೆಯಿಂದ ನದಿ ಉಕ್ಕಿ ಹರಿದು, 5 ಮಂದಿ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.