ADVERTISEMENT

ಚೀನಾದಲ್ಲಿ ಮತ್ತೆ ಹೆಚ್ಚಿದ ಒಮೈಕ್ರಾನ್‌

ಕಳೆದ 2 ವರ್ಷಗಳಲ್ಲಿ ಇದೇ ಮೊದಲಿಗೆ ಹೆಚ್ಚು ಸೋಂಕು

ಏಜೆನ್ಸೀಸ್
Published 14 ಮಾರ್ಚ್ 2022, 16:34 IST
Last Updated 14 ಮಾರ್ಚ್ 2022, 16:34 IST
ಚೀನಾದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪತ್ತೆಗಾಗಿ ಸಾಮೂಹಿಕ ಪರೀಕ್ಷೆ ನಡೆಸುತ್ತಿರುವುದು 
ಚೀನಾದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪತ್ತೆಗಾಗಿ ಸಾಮೂಹಿಕ ಪರೀಕ್ಷೆ ನಡೆಸುತ್ತಿರುವುದು    

ತೈಪೆ: ಸೋಂಕು ನಿಯಂತ್ರಣಕ್ಕಾಗಿ ಚೀನಾ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಪ್ರಮುಖ ನಗರಗಳಲ್ಲಿ ಕೋವಿಡ್ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದೆ. ವೇಗವಾಗಿ ವ್ಯಾಪಿಸುತ್ತಿರುವ ಒಮೈಕ್ರಾನ್ ತಳಿಯಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ 1,337 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ವರ್ಷಗಳಲ್ಲಿ ಇಷ್ಟು ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗಿದ್ದು ಇದೇ ಮೊದಲು.

ಈಶಾನ್ಯ ಭಾಗದಲ್ಲಿರುವ ಜಿಲಿನ್ ಪ್ರಾಂತ್ಯದಲ್ಲಿ 895, ಶೆನ್‌ಝೆನ್‌ನಲ್ಲಿ 75 ಹೊಸ ಪ್ರಕರಣಗಳು ಪತ್ತೆಯಾಗಿವೆ.ವೈರಸ್ ಹೆಚ್ಚಳದ ಕಾರಣಕ್ಕೆ 1.7 ಕೋಟಿ ಜನಸಂಖ್ಯೆ ಇರುವ ಹಾಗೂ ತಾಂತ್ರಿಕ ಮತ್ತು ಹಣಕಾಸು ಹಬ್ ಖ್ಯಾತಿಯ ಶೆನ್‌ಝೆನ್ ನಗರದಲ್ಲಿ ಲಾಕ್‌ಡೌನ್ ಜಾರಿಯಾಗಿದೆ.

ಅಲ್ಲದೆ 6 ಕೋವಿಡ್ ಪ್ರಕಣಗಳು ಪತ್ತೆಯಾದ ಬೀಜಿಂಗ್ ಮತ್ತು 41 ಪ್ರಕರಣಗಳು ದಾಖಲಾದ ಶಾಂಘೈನಲ್ಲಿ ಸೋಂಕಿತರು ಪತ್ತೆಯಾದ ನಿವಾಸಗಳು ಮತ್ತು ಕಚೇರಿ ಕಟ್ಟಡಗಳನ್ನು ಲಾಕ್‌ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಚೀನಾದಲ್ಲಿ ಅಮೆರಿಕ, ಯುರೋಪ್ ಸೇರಿದಂತೆ ಇನ್ನಿತರ ದೇಶಗಳಿಗಿಂತಲೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, 2020ರಲ್ಲಿ ಚೀನಾದ ವುಹಾನ್‌ನಲ್ಲಿ ಕೋವಿಡ್ ಆರಂಭವಾದ ಬಳಿಕ ಇದೀಗ ಮತ್ತೆ ಸೋಂಕು ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ದೇಶದಲ್ಲಿ ಕೋವಿಡ್‌ಗೆ ಬಲಿಯಾಗುವವರ ಸಂಖ್ಯೆ ಕಡಿಮೆಯಿದೆ. ಆದರೆ, ಇದರಿಂದ ವೈದ್ಯಕೀಯ ಸಂಪನ್ಮೂಲಗಳ ಮೇಲೆ ಒತ್ತಡ, ಸಾಮಾಜಿಕ ಜೀವನದ ಮೇಲೆ ಹೊಡೆತ ಹಾಗೂ ಕುಟುಂಬ ಮತ್ತು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒಂದು ವೇಳೆ ನಿರ್ಬಂಧಗಳನ್ನು ಹಿಂಪಡೆದರೆ, ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಮಂದಿಯಲ್ಗಿ ಸೋಂಕು ವ್ಯಾಪಿಸಲು ಕಾರಣವಾಗಲಿದೆ ಎಂದು ರೋಗಾಣು ತಜ್ಞ ಝಾಂಗ್ ವೆನ್‌ಹಾಂಗ್ ತಿಳಿಸಿದ್ದಾರೆ.

ಚೀನಾದ ಇನ್ನಿತರ ನಗರಗಳು ಮತ್ತು ಪ್ರಾಂತ್ಯಗಳಲ್ಲಿ ನೂರಾರು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಏತನ್ಮಧ್ಯೆ, ಹಾಂಗ್‌ಕಾಂಗ್‌ನಲ್ಲಿ ಸೋಮವಾರ ಒಂದೇ ದಿನ 26,908 ಪ್ರಕರಣಗಳು ದಾಖಲಾಗಿದ್ದು, 249 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.