ಬೀಜಿಂಗ್: ತನ್ನ ಅತಿದೊಡ್ಡ ಮಿಲಿಟರಿ ಸರಕು ಸಾಗಣೆ ವಿಮಾನದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗಿದೆ ಎಂಬ ವರದಿಯನ್ನು ಚೀನಾ ಸೋಮವಾರ ಅಲ್ಲಗಳೆದಿದೆ. ಅಂತಹ ವದಂತಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದೆ.
ತನ್ನ ‘ಶಿಯಾನ್ ವೈ–20’ ಮಿಲಿಟರಿ ಸರಕು ಸಾಗಣೆ ವಿಮಾನದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗಿದೆ ಎಂಬ ವರದಿಯನ್ನು ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ (ಪಿಎಲ್ಎಎಫ್) ನಿರಾಕರಿಸಿದೆ.
‘ವೈ-20 ವಿಮಾನವು ಪಾಕಿಸ್ತಾನಕ್ಕೆ ರಕ್ಷಣಾ ಸಾಮಗ್ರಿಗಳನ್ನು ಸಾಗಿಸಿದೆ’ ಎಂಬ ಸುದ್ದಿಗಳು ವೆಬ್‌ಸೈಟ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಿದಾಡಿವೆ. ಅಂತಹ ಸುದ್ದಿಗಳು ಸುಳ್ಳು ಎಂದು ವಾಯುಪಡೆಯು ಹೇಳಿಕೆಯಲ್ಲಿ ತಿಳಿಸಿದೆ’ ಎಂದು ಚೀನಾ ರಕ್ಷಣಾ ಸಚಿವಾಲಯ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿದೆ.
ವೆಬ್‌ಸೈಟ್‌ಗಳಲ್ಲಿ ಹರಿದಾಡಿರುವ ಸುಳ್ಳು ಸುದ್ದಿಗಳ ಸ್ಕ್ರೀನ್‌ಶಾಟ್‌ಗಳನ್ನೂ ಪೋಸ್ಟ್ ಮಾಡಿದೆ. ಪ್ರತಿಯೊಂದು ಪೋಸ್ಟ್ ಮೇಲೂ ಕೆಂಪು ಅಕ್ಷರದಲ್ಲಿ ‘ಇದು ಸುಳ್ಳು ಸುದ್ದಿ’ ಎಂದು ಬರೆಯಲಾಗಿದೆ.
‘ಇಂಟರ್‌ನೆಟ್, ಕಾನೂನಿಗಿಂತ ಮೇಲಲ್ಲ! ಮಿಲಿಟರಿಗೆ ಸಂಬಂಧಿಸಿದ ವದಂತಿಗಳನ್ನು ಹುಟ್ಟುಹಾಕುವವರು ಮತ್ತು ಹರಡುವವರನ್ನು ಕಾನೂನುಬದ್ಧವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ಎಚ್ಚರಿಸಿದೆ.
ಪಾಕಿಸ್ತಾನದೊಂದಿಗೆ ನಿಕಟ ಸಂಬಂಧ ಹೊಂದಿರುವ ಪೀಪಲ್ಸ್ ಲಿಬರೇಷನ್ ಆರ್ಮಿ (ಚೀನಾದ ಸೇನೆ– ಪಿಎಲ್‌ಎ), ಶಸ್ತ್ರಾಸ್ತ್ರ ಪೂರೈಕೆ ಸುದ್ದಿ ನಿರಾಕರಿಸಿರುವುದನ್ನು ಮಹತ್ವದ್ದಾಗಿ ಪರಿಗಣಿಸಲಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿರುವ ಮತ್ತು ಸೇನೆಗೆ ಮತ್ತೆ ಬಲ ತುಂಬಲು ಪಾಕಿಸ್ತಾನಕ್ಕೆ ಮತ್ತೆ ಶಸ್ತ್ರಾಸ್ತ್ರಗಳ ಅವಶ್ಯಕತೆಯಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.
ಪಾಕಿಸ್ತಾನವು ಚೀನಾದ ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುವ ಕಾರಣ, ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಭಾರತ–ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷವನ್ನು ವರದಿ ಮಾಡಲು ಹೆಚ್ಚಿನ ಆಸಕ್ತಿ ತೋರಿಸಿವೆ. ಭಾರತದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕ್ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆಯೇ ಚೀನಾ ಮಾಧ್ಯಮಗಳು ಅದೇ ರೀತಿ ಪ್ರಸಾರ ಮಾಡಿದ್ದವು.
ಸಾಮಾಜಿಕ ಮಾಧ್ಯಮದಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡುವ ಮೊದಲು ಅವುಗಳನ್ನು ಪರಿಶೀಲಿಸುವಂತೆ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸರ್ಕಾರಿ ಸ್ವಾಮ್ಯದ ಟ್ಯಾಬ್ಲಾಯ್ಡ್ ‘ಗ್ಲೋಬಲ್ ಟೈಮ್ಸ್’ಗೆ ಎಚ್ಚರಿಕೆ ನೀಡಿದೆ.
ಚೀನಾ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎಸ್‌ಐಪಿಆರ್‌ಐ) ಈಚೆಗಿನ ವರದಿಯ ಪ್ರಕಾರ ಚೀನಾವು ಪಾಕಿಸ್ತಾನಕ್ಕೆ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ.
2020ರಿಂದ 2024ರವರೆಗೆ ಪಾಕಿಸ್ತಾನದ ಶಸ್ತ್ರಾಸ್ತ್ರ ಖರೀದಿಯಲ್ಲಿ ಶೇ81 ರಷ್ಟು ಪಾಲನ್ನು ಚೀನಾ ಹೊಂದಿದೆ. ಈಚೆಗೆ ಖರೀದಿಸಿರುವ ಜೆಟ್ ಫೈಟರ್‌ಗಳು ರೇಡಾರ್‌ಗಳು ಯುದ್ಧನೌಕೆಗಳು ಜಲಾಂತರ್ಗಾಮಿ ನೌಕೆಗಳು ಮತ್ತು ಕ್ಷಿಪಣಿಗಳೂ ಇದರಲ್ಲಿ ಸೇರಿವೆ. ಪಾಕಿಸ್ತಾನ ವಾಯುಪಡೆಯ ಪ್ರಮುಖ ಶಕ್ತಿಯಾಗಿರುವ ಜೆ–17 ಯುದ್ಧ ವಿಮಾನಗಳನ್ನು ಎರಡೂ ದೇಶಗಳು ಜಂಟಿಯಾಗಿ ತಯಾರಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.