ADVERTISEMENT

ಚೀನಾ ಪ್ರವಾಹ: ಮೃತರ ಸಂಖ್ಯೆ 33ಕ್ಕೆ ಏರಿಕೆ

ಪಿಟಿಐ
Published 22 ಜುಲೈ 2021, 8:44 IST
Last Updated 22 ಜುಲೈ 2021, 8:44 IST
ಚೀನಾದ ಹೆನಾನಾ ಪ್ರಾಂತ್ಯದ ಜೆಂಗ್‌ಜೌ ನಗರದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ                     –ರಾಯಿಟರ್ಸ್‌ ಚಿತ್ರ
ಚೀನಾದ ಹೆನಾನಾ ಪ್ರಾಂತ್ಯದ ಜೆಂಗ್‌ಜೌ ನಗರದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ                     –ರಾಯಿಟರ್ಸ್‌ ಚಿತ್ರ   

ಬೀಜಿಂಗ್‌: ‘ಚೀನಾದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಸಾವಿಗೀಡಾದವರ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, 8 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

‘ಹೆನಾನ್‌ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದಾಗಿ 30 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದು, 3,76,000 ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಪ್ರಾಂತ್ಯದ ತುರ್ತು ನಿರ್ವಹಣಾ ಇಲಾಖೆಯು ತಿಳಿಸಿದೆ.

‘ಪ್ರವಾಹದಿಂದಾಗಿ 2,15,200 ಹೆಕ್ಟರ್‌ಗೂ ಹೆಚ್ಚು ಬೆಳೆಗಳು ಹಾನಿಯಾಗಿವೆ. ಹೆನಾನ್‌ ಪ್ರಾಂತ್ಯದ ಜೆಂಗ್‌ಜೌನಲ್ಲಿ ಸಬ್‌ವೇ ಮಾರ್ಗಗಳು ಜಲಾವೃತಗೊಂಡಿವೆ’ ಎಂದು ವರದಿಯಾಗಿದೆ.

ADVERTISEMENT

‘ಪ್ರವಾಹ ಪರಿಸ್ಥಿತಿ ಅತ್ಯಂತ ಕಠೋರವಾಗಿದೆ. ಇದರಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆನಾನ್‌ ಪ್ರಾಂತ್ಯ ಮತ್ತು ಜೆಂಗ್‌ಜೌ ನಗರವು ಪ್ರವಾಹದಿಂದಾಗಿ ಅತಿ ಹೆಚ್ಚು ಹಾನಿಗೊಳಗಾಗಿದೆ. ಹಾಗಾಗಿ ಅಧಿಕಾರಿಗಳು ಜನರ ಸುರಕ್ಷತೆಗೆ ಪ್ರಮುಖ ಆದ್ಯತೆ ಕೊಡಬೇಕು’ ಎಂದು ಚೀನಾದ ಅಧ್ಯಕ್ಷ ಷಿ ಜಿಂಗ್‌ಪಿನ್‌ ಆದೇಶಿಸಿದ್ದಾರೆ.

‘ಜೆಂಗ್‌ಜೌ ಮತ್ತು ಇತರೆ ನಗರಗಳು ಜಲಾವೃತವಾಗಿವೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಲವು ಅಣೆಕಟ್ಟೆಗಳಿಗೆ ತೀವ್ರ ಹಾನಿ ಉಂಟಾಗಿದೆ. ಕೆಲವು ಕಡೆಗಳಲ್ಲಿ ರೈಲು ಮತ್ತು ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

80 ಕ್ಕೂ ಹೆಚ್ಚು ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. 100 ಕ್ಕೂ ಹೆಚ್ಚು ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸಬ್‌ವೇ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.