ಸೊಳ್ಳೆ ರೀತಿ ಕಾಣುವ, ಸೊಳ್ಳೆಯದ್ದೇ ಗಾತ್ರದ ಡ್ರೋನ್ ಅಭಿವೃದ್ಧಿಪಡಿಸಿದ ಚೀನಾ!
ಬೆಂಗಳೂರು: ಚೀನಾ ದೇಶ, ನೋಡಲು ಸೊಳ್ಳೆ ರೀತಿ ಕಾಣುವ ಹಾಗೂ ಸೊಳ್ಳೆಯದ್ದೇ ಗಾತ್ರದ ಡ್ರೋನ್ ಅನ್ನು ಆವಿಷ್ಕರಿಸಿ ಜಗತ್ತನ್ನು ನಿಬ್ಬೆರಗಾಗುವಂತೆ ಮಾಡಿದೆ.
ಚೀನಾ ಸೇನೆಯ ರೊಬೊ ಟೆಕ್ನಾಲಜಿ ಸೈನಿಕರು ಈ ಸೊಳ್ಳೆ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದ್ದು, ಸೇನೆಯ ಬೇಹುಗಾರಿಕೆಗಾಗಿ ಪ್ರಮುಖವಾಗಿ ಬಳಸಲಾಗುವುದು ಎಂದು ಚೀನಾ ಸೇನೆ ಹೇಳಿಕೊಂಡಿರುವುದಾಗಿ ದಿ ಸನ್ ವೆಬ್‌ಸೈಟ್ ವರದಿ ಮಾಡಿದೆ.
ಅಲ್ಲದೇ ಚೀನಾ ಸ್ಟೇಟ್ ಮೀಡಿಯಾ ಸೊಳ್ಳೆ ಡ್ರೋನ್ ಅನ್ನು ಜಗತ್ತಿಗೆ ತೋರಿಸುವ ಕಿರು ವಿಡಿಯೊವನ್ನು ಬಿಡುಗಡೆ ಮಾಡಿದೆ ಎಂದು ವರದಿ ಹೇಳಿದೆ. ಆ ವಿಡಿಯೊ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಬೇಹುಗಾರಿಕೆ, ಸೇನೆಯ ಕಠಿಣ ಕಾರ್ಯಾಚರಣೆ ಹಾಗೂ ತುರ್ತು ಸಂದರ್ಭಗಳಲ್ಲಿ ಕೇವಲ 0.6 ಸೆಂಟಿ ಮೀಟರ್ ಇರುವ ಈ ಸೊಳ್ಳೆ ಡ್ರೋನ್‌ಗಳನ್ನು ಬಳಸಲಾಗುತ್ತದೆ ಎಂದು ಸೇನೆ ಹೇಳಿಕೊಂಡಿದೆ.
ಆದರೆ, ಈ ಹೊಸ ಆವಿಷ್ಕಾರದ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಡ್ರೋನ್‌ನಿಂದ ಕ್ರಿಮಿನಲ್‌ಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗುತ್ತದೆ. ವ್ಯಕ್ತಿಗಳ ಖಾಸಗಿ ಮಾಹಿತಿ ಸೋರಿಕೆಯಾಗಬಹುದು. ಇನ್ನೂ ಹಲವು ದುಷ್ಪರಿಣಾಮಗಳು ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.