ADVERTISEMENT

ಹಾಂಗ್‌ಕಾಂಗ್‌ ಮೇಲಿನ ನಿಯಂತ್ರಣ ಬಿಗಿಗೊಳಿಸಲು ನೂತನ ಮಸೂದೆ

ಚೀನಾ ನಡೆಗೆ ಪ್ರತಿಪಕ್ಷಗಳ ಟೀಕೆ: ‘ಒಂದು ದೇಶ, ಎರಡು ವ್ಯವಸ್ಥೆ‘ ಚಿಂತನೆಗೆ ವಿರುದ್ಧ ಎಂದು ಟೀಕೆ

ಪಿಟಿಐ
Published 22 ಮೇ 2020, 21:27 IST
Last Updated 22 ಮೇ 2020, 21:27 IST

ಬೀಜಿಂಗ್‌ : ಹಾಂಗ್‌ಕಾಂಗ್ ಮೇಲಿನ ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸಲು ಹೊಸ ರಾಷ್ಟ್ರೀಯ ಭದ್ರತಾ ಮಸೂದೆಯನ್ನು ಚೀನಾ ಸಂಸತ್ತಿನಲ್ಲಿ ಮಂಡಿಸಿತು.

ಹಾಂಗ್‌ಕಾಂಗ್ ಚೀನಾದ ನಿಯಂತ್ರಣಕ್ಕೆ ಒಳಪಟ್ಟ (1997) ನಂತರ ಆ ಪ್ರದೇಶದ ಸ್ವಾಯತ್ತತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಉದ್ದೇಶಿತ ಮಸೂದೆ ದೊಡ್ಡ ಹೊಡೆತ ಎಂದು ಬಣ್ಣಿಸಲಾಗಿದೆ. ನೂತನ ಮಸೂದೆ ಕಾನೂನು ಮತ್ತು ಜಾರಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಅವಕಾಶ ಕಲ್ಪಿಸಲಿದೆ.

ಮಸೂದೆ ಮಂಡನೆಯು ಚೀನಾದ ಕೇಂದ್ರ ಸರ್ಕಾರದ ಉದ್ದೇಶವನ್ನು ಸ್ಪಷ್ಟಪಡಿಸಿದ್ದರೂ, ಹಾಂಗ್‌ಕಾಂಗ್‌ನಲ್ಲಿ ಸ್ಥಳೀಯ ಆಡಳಿತ ಇದನ್ನು ಕಾಯ್ದೆಯಾಗಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗುವುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಏಕೆಂದರೆ, ಸದ್ಯ ಹಾಂಗ್‌ ಕಾಂಗ್‌ನಲ್ಲಿ ರಾಜಕೀಯ ಅನಿಶ್ಚಿತತೆ ಇದ್ದು, ಪ್ರತಿರೋಧದ ವಾತಾವರಣವಿದೆ.

ADVERTISEMENT

ಪ್ರತಿಪಕ್ಷಗಳ ಟೀಕೆ:ಮಸೂದೆಯನ್ನು ಮಂಡಿಸುವ ಚೀನಾ ನಡೆಯನ್ನು ಹಾಂಗ್‌ಕಾಂಗ್‌ನ ಪ್ರತಿ ಪಕ್ಷಗಳು ತೀವ್ರವಾಗಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿವೆ.

ಹಾಂಗ್‌ಕಾಂಗ್ ಪ್ರಜಾಪ್ರಭುತ್ವ ಪರ ಸಂಸದರು, ಮಸೂದೆ ಮಂಡನೆಯನ್ನು ವಿರೋಧಿಸಿದ್ದು, ಈ ಕ್ರಮವು ‘ಒಂದು ದೇಶ, ಎರಡು ವ್ಯವಸ್ಥೆ’ ನೀತಿಗೆ ವಿರುದ್ಧವಾಗಿದೆ. ನಗರದ ಸ್ವಾತಂತ್ರ್ಯ ಕುರಿತು ನೀಡಿದ್ದ ಭರವಸೆಯನ್ನು ಕಡೆಗಣಿಸಲಾಗಿದೆ ಎಂದು ಹೇಳಿದ್ದಾರೆ.

ಚೀನಾ ಸಂಸತ್‌ ಅಧಿವೇಶನದ ಮೊದಲ ದಿನ ಮಂಡಿಸಲಾದ ಮಸೂದೆ ಪ್ರತ್ಯೇಕತಾವಾದಿ ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ಹತ್ತಿಕ್ಕುವುದು ಹಾಗೂ ವಿದೇಶಿ ಹಸ್ತಕ್ಷೇಪ, ಭಯೋತ್ಪಾದಕ ಕೃತ್ಯಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ.

ಈ ಮಸೂದೆಯ ಮೂಲಕ ಕ್ಸಿ ಜಿಂನ್‌ಪಿಂಗ್ ಅವರು ‘ಒಂದು ದೇಶ, ಎರಡು ವ್ಯವಸ್ಥೆ’ ಚಿಂತನೆಯನ್ನು ಕಡೆಗಣಿಸಿದ್ದಾರೆ ಎಂದು ಮಾಜಿ ಸಂಸದ ಲೀ ಚ್ಯುಕ್‌ ಯಾನ್ ಟೀಕಿಸಿದ್ದಾರೆ.

ಮಸೂದೆಯ ಉದ್ದೇಶ ಹಾಂಗ್‌ಕಾಂಗ್‌ ಮೇಲೆ ಪೂರ್ಣ ನಿಯಂತ್ರಣ ಸಾಧಿಸುವುದೇ ಆಗಿದೆ. ಕಮ್ಯುನಿಸ್ಟ್ ಪಕ್ಷದ ನಡೆಯನ್ನು ವಿರೋಧಿಸುವ ಪ್ರತಿ ಸಂಘಟನೆಯನ್ನು ನಿಷೇಧಿಸುವ ಗುರಿ ಹೊಂದಿದೆ ಎಂದು ವಿರೋಧ ಪಕ್ಷಗಳು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.