ADVERTISEMENT

ಕೋವಿಡ್‌: ಬೃಹತ್‌ ಪ್ರಮಾಣದ ಲಸಿಕೆ ವಿತರಣೆಗೆ ಚೀನಾ ಸಿದ್ಧತೆ

ಏಜೆನ್ಸೀಸ್
Published 6 ಡಿಸೆಂಬರ್ 2020, 7:29 IST
Last Updated 6 ಡಿಸೆಂಬರ್ 2020, 7:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತೈಪೆ: ಚೀನಾದಲ್ಲಿ ಅಭಿವೃದ್ಧಿಪಡಿಸಿರುವ ಕೋವಿಡ್‌–19 ವಿರುದ್ಧದ ಲಸಿಕೆಗಳನ್ನು ಮಾನವನ ಮೇಲೆ ಪ್ರಯೋಗಿಸುವ ಕಾರ್ಯ ವಿವಿಧ ಹಂತದಲ್ಲಿದೆ. ಈ ನಡುವೆಯೇ, ಅಲ್ಲಿನ ಪ್ರಾಂತೀಯ ಸರ್ಕಾರಗಳು ಲಸಿಕೆ ಸಂಗ್ರಹಕ್ಕೆ ಮುಂದಾಗಿದ್ದು, ಲಸಿಕೆ ಪೂರೈಕೆಗೆ ಬೇಡಿಕೆ ಸಲ್ಲಿಸಿವೆ.

ಈ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ಆರೋಗ್ಯಾಧಿಕಾರಿಗಳು ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ಅಲ್ಲದೇ, ಚೀನಾದ ಜನಸಂಖ್ಯೆ 140 ಕೋಟಿ. ಇಷ್ಟು ಸಂಖ್ಯೆಯ ಜನರಿಗೆ ಲಸಿಕೆಯನ್ನು ಹೇಗೆ ತಲುಪಿಸಲಾಗುತ್ತದೆ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ ಎಂದು ಮೂಲಗಳು ಹೇಳಿವೆ.

ಚೀನಾದಲ್ಲಿ ಪ್ರಸ್ತುತ ಐದು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ರಷ್ಯಾ, ಈಜಿಪ್ಟ್‌, ಮೆಕ್ಸಿಕೊ ಸೇರಿದಂತೆ 12ಕ್ಕೂ ಅಧಿಕ ದೇಶಗಳಲ್ಲಿ ಈ ಲಸಿಕೆಗಳ ಪ್ರಯೋಗ ನಡೆದಿದೆ. ಚೀನಾದಲ್ಲಿಯೇ 10 ಲಕ್ಷ ಜನರಿಗೆ ಕೋವಿಡ್‌–19 ಲಸಿಕೆಯ ಪ್ರಾಯೋಗಿಕ ಡೋಸ್‌ ನೀಡಲಾಗಿದೆ ಎಂದು ಈ ಮೂಲಗಳು ಹೇಳಿವೆ.

ADVERTISEMENT

ಲಸಿಕೆ ತಯಾರಿಸುವ ಕಂಪನಿಗಳ ಪೈಕಿ ಸೈನೋಫಾರ್ಮಾ ತನ್ನ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದೆ.

ಮತ್ತೊಂದು ಔಷಧಿ ತಯಾರಿಕಾ ಕಂಪನಿ ಸೈನೋವ್ಯಾಕ್‌ನ ಲಸಿಕೆಯ ಪ್ರಯೋಗ ಬ್ರೆಜಿಲ್‌, ಟರ್ಕಿ ಮತ್ತು ಇಂಡೊನೇಷ್ಯಾದಲ್ಲಿ ನಡೆದಿದೆ. ಇಲ್ಲಿನ ಪ್ರಯೋಗಗಳ ಕುರಿತ ವರದಿ ‘ಲ್ಯಾನ್ಸೆಟ್‌’ ಎಂಬ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟಗೊಂಡಿದೆ.

ಕೋವಿಡ್‌ನಿಂದ ಗುಣಮುಖರಾದವರಲ್ಲಿ ಸೃಷ್ಟಿಯಾಗಿರುವ ಪ್ರತಿಕಾಯಗಳ ಸಂಖ್ಯೆಗೆ ಹೋಲಿಸಿದಲ್ಲಿ, ಸೈನೋವ್ಯಾಕ್‌ನ ಲಸಿಕೆ ಪಡೆದವರಲ್ಲಿ ಕಡಿಮೆ ಪ್ರಮಾಣದ ಪ್ರತಿಕಾಯಗಳು ಸೃಷ್ಟಿಯಾಗಿವೆ ಎಂದು ನಿಯತಕಾಲಿಕದಲ್ಲಿ ಪ್ರಕಟಗೊಂಡ ಅಧ್ಯಯನ ವರದಿ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.