ADVERTISEMENT

ಭಾರತ–ಪಾಕ್‌ ಕದನ ವಿರಾಮಕ್ಕಾಗಿ ರಚನಾತ್ಮಕ ಪಾತ್ರ: ಚೀನಾ

ಪಿಟಿಐ
Published 19 ಮೇ 2025, 14:19 IST
Last Updated 19 ಮೇ 2025, 14:19 IST
<div class="paragraphs"><p>ಭಾರತ-ಚೀನಾ</p></div>

ಭಾರತ-ಚೀನಾ

   

ಬೀಜಿಂಗ್: ಭಾರತ–ಪಾಕಿಸ್ತಾನ ನಡುವಣ ‘ಶಾಶ್ವತ ಕದನ ವಿರಾಮ’ ಸ್ಥಾಪನೆಯಲ್ಲಿ ದೇಶವು ರಚನಾತ್ಮಕ ಪಾತ್ರ ವಹಿಸಲಿದೆ ಎಂದು ಚೀನಾ ಸೋಮವಾರ ಹೇಳಿದೆ.

ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಮಹಮ್ಮದ್‌ ಇಶಾಕ್‌ ಡಾರ್‌ ಅವರು ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ವಾಂಗ್‌ ಯಿ ಅವರೊಂದಿಗೆ ಮಾತುಕತೆಗಾಗಿ ಬೀಜಿಂಗ್‌ಗೆ ಸೋಮವಾರ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಚೀನಾ ಈ ಹೇಳಿಕೆ ನೀಡಿದೆ.

ADVERTISEMENT

ಭಾರತವು ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ನಂತರ, ಪಾಕಿಸ್ತಾನದ ಉನ್ನತ ಅಧಿಕಾರಿಯೊಬ್ಬರು ಇದೇ ಮೊದಲ ಬಾರಿಗೆ ಚೀನಾಗೆ ಬೇಟಿ ನೀಡಿದ್ದಾರೆ.

ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸುವ ಭಾರತದ ನಿರ್ಧಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಿತ್ರ ರಾಷ್ಟ್ರದೊಂದಿಗೆ ಡಾರ್‌ ಅವರು ಮಾತುಕತೆ ನಡೆಸುವ ನಿರೀಕ್ಷೆ ಇದೆ. ‍

‘ಚೀನಾ, ಪಾಕಿಸ್ತಾನ ಎರಡೂ ಸರ್ವಋತು ಸಹಕಾರ ಕಾರ್ಯತಂತ್ರದ ಪಾಲುದಾರ ರಾಷ್ಟ್ರಗಳು. ಡಾರ್‌ ಅವರ ಈ ಭೇಟಿಯು ಉಭಯ ದೇಶಗಳ ಸಂಬಂಧ ವೃದ್ಧಿಗೆ ಪಾಕಿಸ್ತಾನ ಸರ್ಕಾರ ನೀಡಿರುವ ಮಹತ್ವವನ್ನು ಬಿಂಬಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಉಭಯ ದೇಶಗಳ ಜತೆ ಮಾತುಕತೆಗೆ ಚೀನಾ ಸಿದ್ಧವಿದೆ ಮತ್ತು ‘ಶಾಶ್ವತ ಕದನ ವಿರಾಮ’ ಒಪ್ಪಂದ ಮೂಡುವಂತೆ ಮಾಡುವಲ್ಲಿ ಚೀನಾ ರಚನಾತ್ಮಕ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.

ಭಾರತ ಮತ್ತು ಪಾಕಿಸ್ತಾನ ಚೀನಾದ ಪ್ರಮುಖ ನೆರೆಯ ದೇಶಗಳು. ಈ ಎರಡೂ ದೇಶಗಳೊಂದಿಗೆ ಸಂಬಂಧ ವೃದ್ಧಿಗೆ ಚೀನಾ ಆದ್ಯತೆ ನೀಡುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.