
ಅಮೆರಿಕ– ಚೀನಾ
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಕಿರು ಯುದ್ಧವನ್ನು ಚೀನಾ ತನ್ನ ಶಸ್ತ್ರಾಸ್ತ್ರಗಳ ಪ್ರಯೋಗಕ್ಕೆ ಬಳಸಿಕೊಂಡಿತ್ತು ಎಂದು ಅಮೆರಿಕದ ಸಂಸತ್ ಸಮಿತಿಯು ಆರೋಪಿಸಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ದಿನಗಳ ಯುದ್ಧವನ್ನು ಚೀನಾ ತನ್ನ ಶಸ್ತ್ರಾಸ್ತ್ರಗಳ ಒಂದು ನೇರ ಪರೀಕ್ಷಾ ಮೈದಾನವಾಗಿ ಪರಿಗಣಿಸಿತ್ತು ಎಂದು ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಷ್ಕರಣಾ ಸಮಿತಿ ಹೇಳಿದೆ. ಆ ಯುದ್ಧವನ್ನು ತನ್ನ ಇತ್ತೀಚಿನ ಶಸ್ತ್ರಾಸ್ತ್ರ ವ್ಯವಸ್ಥೆಗಳ ವ್ಯಾಪ್ತಿ ಮತ್ತು ಪರಿಷ್ಕರಣೆಯನ್ನು ಪ್ರದರ್ಶಿಸಲು ಬಳಸಿಕೊಂಡಿದ್ದು, ಯುದ್ಧದಲ್ಲಿ ಚೀನಾ ನೇರ ಪಾತ್ರ ಪ್ರದರ್ಶಿಸಿಲ್ಲ ಎಂದು ಅದು ಹೇಳಿದೆ.
ಚೀನಾದ ಆಧುನಿಕ ಯುದ್ಧೋಪಕರಣಗಳಾದ ಎಚ್‌ಕ್ಯೂ-9 ವಾಯು ರಕ್ಷಣಾ ವ್ಯವಸ್ಥೆ, ಪಿಎಲ್-15 ವಾಯು-ಟು-ಏರ್ ಕ್ಷಿಪಣಿಗಳು ಮತ್ತು ಜೆ-10 ಫೈಟರ್ ಜೆಟ್‌ಗಳನ್ನು ಯುದ್ಧದಲ್ಲಿ ನಿಯೋಜಿಸಲಾಗಿತ್ತು. ಬಳಿಕ, 2025ರ ಜೂನ್‌ನಲ್ಲಿ ಪಾಕಿಸ್ತಾನಕ್ಕೆ ಐದನೇ ತಲೆಮಾರಿನ ಫೈಟರ್ ಜೆಟ್‌ಗಳಾದ ಜೆ-35, ಕೆಜೆ-500 ವಿಮಾನಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಮಾರಾಟ ಮಾಡಲು ಮುಂದಾಗಿತ್ತು ಎಂದು ವರದಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್‌ನ ಭೀಕರ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಆಪರೇಷನ್ ಸಿಂಧೂರ ಎಂಬ ಪ್ರತಿದಾಳಿ ಆರಂಭಿಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ದಾಳಿಗೆ ಮುಂದಾಗಿತ್ತು. ಬಳಿಕ, ುಭಯ ದೇಶಗಳ ನಡುವೆ ಮಾತುಕತೆ ಬಳಿಕ ಯುದ್ಧ ವಿರಾಮಕ್ಕೆ ಬರಲಾಗಿತ್ತು.
ಯುದ್ಧ ಕೊನೆಗೊಂಡ ಬೆನ್ನಲ್ಲೇ ಭಾರತ ಖರೀದಿಸಿರುವ ಫ್ರಾನ್ಸ್‌ನ ರಫೇಲ್ ಜೆಟ್ ವಿಮಾನದ ಕ್ಷಮತೆ ಬಗ್ಗೆ ಚೀನಾ ತಪ್ಪು ಮಾಹಿತಿ ಹರಡಿತ್ತು ಎಂದೂ ವರದಿ ತಿಳಿಸಿದೆ.
‘ಫ್ರೆಂಚ್ ಗುಪ್ತಚರ ಸಂಸ್ಥೆಯ ಪ್ರಕಾರ, ರಫೇಲ್ ಯುದ್ಧ ವಿಮಾನಗಳ ಮಾರಾಟವನ್ನು ತಗ್ಗಿಸಲು ಚೀನಾ ಅವುಗಳ ಕುರಿತಂತೆ ತಪ್ಪು ಮಾಹಿತಿಗಳನ್ನು ಹರಡಲು ಆರಂಭಿಸಿತ್ತು. ತನ್ನ ಜೆ–35 ವಿಮಾನಗಳನ್ನು ಮಾರಾಟ ಮಾಡಲು ಚೀನಾ ಈ ಕೃತ್ಯಕ್ಕೆ ಕೈಹಾಕಿತ್ತು. ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸಿಕೊಂಡು ಜೆ–35 ಯುದ್ಧ ವಿಮಾನವು ಹೊಡೆದುರುಳಿಸಿದೆ ಎಂದು ಅವಶೇಷಗಳನ್ನು ತೋರಿಸುವ ನಕಲಿ ವಿಡಿಯೊಗಳನ್ನು ಸೃಷ್ಟಿಸಿತ್ತು’ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.