ADVERTISEMENT

ಚೀನಾದ 21 ಪ್ರಾಂತ್ಯಗಳಿಗೆ ವ್ಯಾಪಿಸಿದ ಕೋವಿಡ್‌

ಐಎಎನ್ಎಸ್
Published 14 ನವೆಂಬರ್ 2021, 10:16 IST
Last Updated 14 ನವೆಂಬರ್ 2021, 10:16 IST
ಬೀಜಿಂಗ್‌ನಲ್ಲಿ ನಡೆಯುತ್ತಿರುವ ಕೋವಿಡ್‌ ಪತ್ತೆ ಪರೀಕ್ಷೆ (ರಾಯಿಟರ್ಸ್‌ ಚಿತ್ರ)
ಬೀಜಿಂಗ್‌ನಲ್ಲಿ ನಡೆಯುತ್ತಿರುವ ಕೋವಿಡ್‌ ಪತ್ತೆ ಪರೀಕ್ಷೆ (ರಾಯಿಟರ್ಸ್‌ ಚಿತ್ರ)    

ಬೀಜಿಂಗ್‌: ಚೀನಾದಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿರುವ ಕೋವಿಡ್‌ ಅಲೆಯು ಪ್ರಾಂತ್ಯ ಮಟ್ಟದ 21 ಪ್ರದೇಶಗಳಿಗೆ ವ್ಯಾಪಿಸಿದೆ. ಅಲ್ಲಿ ಕಳೆದ ಕೆಲವು ದಿನಗಳಿಂದ ಹೊಸ ಪ್ರಕರಣಗಳು, ಲಕ್ಷಣರಹಿತ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಹೊರಗಿನಿಂದ ದೇಶದ ಒಳಗೆ ಬರುವ ಸೋಂಕಿತರನ್ನು ತಡೆಗಟ್ಟುವ ಸವಾಲನ್ನು ದೇಶ ಎದುರಿಸುತ್ತಿದೆ. ಹೀಗಾಗಿ ಗಡಿಯಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ,’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್‌ಎಚ್‌ಸಿ) ವಕ್ತಾರ ಮಿ ಫೆಂಗ್ ಅವರ ಹೇಳಿಕೆ ಉಲ್ಲೇಖಿಸಿ ಸುದ್ದಿ ಸಂಸ್ಥೆ ‘ಕ್ಸಿನುಹ್‌’ ವರದಿ ಮಾಡಿದೆ.

ಇದೆ ಹೊತ್ತಲ್ಲೇ ಕಡಿಮೆ ತಾಪಮಾನದ ಕಾರಣದಿಂದ ಉಂಟಾಗುವ ಉಸಿರಾಟದ ಕಾಯಿಲೆಗಳೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದು ಕೊರೊನಾ ವೈರಸ್‌ ಸೊಂಕು ಪ್ರಕರಣಗಳು ದ್ವಿಗುಣಗೊಳ್ಳುವಂತೆ ಮಾಡುತ್ತಿದೆ ಎಂದು ಮಿ ಫೆಂಗ್‌ ಹೇಳಿದ್ದಾರೆ.

ADVERTISEMENT

ರಾಷ್ಟ್ರೀಯ ಆರೋಗ್ಯ ಆಯೋಗದ ಅಂಕಿ ಅಂಶಗಳ ಪ್ರಕಾರ ಚೀನಾದ ಒಟ್ಟು ಕೋವಿಡ್‌ ಪ್ರಕರಣ ಭಾನುವಾರ 98,263ಕ್ಕೆ ತಲುಪಿದೆ. ಇದರಲ್ಲಿ 1,350 ರೋಗಿಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 19 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ 70 ಹೊಸ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 60 ಲಿಯಾನಿಂಗ್‌ನಲ್ಲೇ ಪತ್ತೆಯಾಗಿವೆ. ಮೂರು ಹೆಬೈನಲ್ಲಿ, ಹೈಲಾಂಗ್‌ಜಿಯಾಂಗ್, ಜಿಯಾಂಗ್‌ಕ್ಸಿಯಲ್ಲಿ ತಲಾ ಎರಡು ಮತ್ತು ಯುನ್ನಾನ್‌, ಸಿಚುವಾನ್‌ನಲ್ಲಿ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ. ಚೀನಾದಲ್ಲಿ ಈ ವರೆಗೆ 4636 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.