ಬೀಜಿಂಗ್: ಚೀನಾದಲ್ಲಿ ಮಂಗಳವಾರ 180 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಕಳೆದ ತಿಂಗಳು ಕೋವಿಡ್ ಉಲ್ಬಣಗೊಂಡ ಬಳಿಕ ವರದಿಯಾದ ಅತಿ ಹೆಚ್ಚಿನ ಸಂಖ್ಯೆಯ ದೈನಂದಿನ ಪ್ರಕರಣವಾಗಿದೆ.
‘ಚೀನಾದಲ್ಲಿ ಸ್ಥಳೀಯವಾಗಿ ಪ್ರಸರಣಗೊಂಡ 108 ಪ್ರಕರಣಗಳು, ರೋಗಲಕ್ಷಣಗಳಿಲ್ಲದ ಪ್ರಕರಣಗಳು ಸೇರಿದಂತೆ 180 ಪ್ರಕರಣಗಳು ವರದಿಯಾಗಿವೆ. ಇಲ್ಲಿ ಪ್ರಸ್ತುತ 1,702 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 54 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗವು (ಎನ್‌ಎಂಸಿ) ಹೇಳಿದೆ.
ಪ್ರಸ್ತುತ ಹುಬೈ ಪ್ರಾಂತ್ಯದಲ್ಲಿ 68 ಕೋವಿಡ್ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2019ರಲ್ಲಿ ಕೊರೊನಾ ವೈರಸ್ ಮೊದಲು ಪತ್ತೆಯಾದ ಚೀನಾದ ವುಹಾನ್ ನಗರದಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಇಲ್ಲಿ ಈಗಾಗಲೇ ಸಾಮೂಹಿಕ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
‘ಹುಬೈನಲ್ಲಿ 80 ರೋಗಲಕ್ಷಣಗಳಿಲ್ಲದ ಪ್ರಕರಣಗಳು ವರದಿಯಾಗಿದ್ದು,ಈ ಸೋಂಕಿತರ ಮೇಲೆ ನಿಗಾ ಇರಿಸಲಾಗಿದೆ. 23 ಪ್ರಾಂತ್ಯಗಳ ಪೈಕಿ 13ರಲ್ಲಿ ಡೆಲ್ಟಾ ರೂಪಾಂತರ ತಳಿಯು ವೇಗವಾಗಿ ಹರಡುತ್ತಿದೆ’ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಚೀನಾದಲ್ಲಿ ಭಾನುವಾರದಿಂದ ಕೋವಿಡ್ ಪ್ರಸರಣ ತಡೆಯಲು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಕೋವಿಡ್ ಪ್ರಕರಣಗಳು ಹೆಚ್ಚಿರುವ ಪ್ರಾಂತ್ರ್ಯಗಳಿಗೆ ಪ್ರಯಾಣಿಸದಂತೆ ಬೀಜಿಂಗ್ ನಾಗರಿಕರಿಗೆ ಸೂಚಿಸಲಾಗಿದೆ.
ಚೀನಾದಲ್ಲಿ ಕಳೆದ ವರ್ಷದಿಂದ ಈವರೆಗೆ 4,636 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.