ADVERTISEMENT

ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ, ಶಾಂತಿ ಮಾತುಕತೆ ಆರಂಭಿಸಲು ಚೀನಾ ಮನವಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 12:31 IST
Last Updated 2 ಜೂನ್ 2023, 12:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಪಶ್ಚಿಮದ ರಾಷ್ಟ್ರಗಳು ಉಕ್ರೇನ್‌ ಯುದ್ಧ ಭೂಮಿಗೆ ಶಸ್ತ್ರಾಸ್ತ್ರಗಳ ಪೂರೈಕೆ ಸ್ಥಗಿತಗೊಳಿಸಬೇಕು ಮತ್ತು ಸಂಘರ್ಷ ಕೊನೆಗೊಳಿಸಲು ಶಾಂತಿ ಮಾತುಕತೆ ಆರಂಭಿಸಬೇಕು ಎಂದು ಚೀನಾದ ಉಕ್ರೇನ್‌ ರಾಯಭಾರಿ ಲಿ ಹುಯಿ ಶುಕ್ರವಾರ ಮನವಿ ಮಾಡಿದ್ದಾರೆ.

ರಷ್ಯಾ ಆಕ್ರಮಿತ ಉಕ್ರೇನ್‌ ಪ್ರದೇಶಗಳಿಂದ, ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಲು ಉಕ್ರೇನ್‌ಗೆ ಅಮೆರಿಕ ಮತ್ತು ಐರೋಪ್ಯ ದೇಶಗಳ ಮಿತ್ರಕೂಟವು ಕ್ಷಿಪಣಿಗಳು, ಯುದ್ಧ ಟ್ಯಾಂಕ್‌ಗಳು ಮತ್ತು ಇನ್ನಿತರ ಶಸ್ತ್ರಾಸ್ತ್ರಗಳ ಪೂರೈಕೆ ಹೆಚ್ಚಿಸಿದ ಬೆನ್ನಲ್ಲೇ ಲಿ ಹುಯಿ ಅವರು ಈ ಮನವಿ ಮಾಡಿದ್ದಾರೆ.

ಲಿ ಹುಯಿ ಅವರು ಇತ್ತೀಚೆಗೆ ಉಕ್ರೇನ್‌ಗೆ ಕೈಗೊಂಡಿದ್ದ ಭೇಟಿಯ ವೇಳೆ ಸಂಘರ್ಷ ಶಮನಗೊಳಿಸುವ ಶಾಂತಿಮಾತುಕತೆಯಲ್ಲಿ ಯಾವುದೇ ಪ್ರಗತಿ ಆಗಿರುವ ಸೂಚನೆ ಕಾಣಿಸಿಲ್ಲ. ಅವರು ಮೇ 15ರಿಂದ 28ರವರೆಗೆ ಉಕ್ರೇನ್‌, ರಷ್ಯಾ, ಪೋಲೆಂಡ್‌, ಫ್ರಾನ್ಸ್‌, ಜರ್ಮನಿ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಐರೋಪ್ಯ ಒಕ್ಕೂಟದ ಪ್ರಧಾನ ಕಚೇರಿಗೂ ಭೇಟಿ ನೀಡಿದ್ದರು.

ADVERTISEMENT

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಸರ್ಕಾರವು, ಉಕ್ರೇನ್‌ ಆಕ್ರಮಣದಲ್ಲಿ ತಟಸ್ಥ ನಿಲವು ಅನುಸರಿಸಿದ್ದು, ಸಂಘರ್ಷ ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಬಯಸಿದೆ. ಆದರೆ, ರಷ್ಯಾಕ್ಕೆ ಅದು ರಾಜಕೀಯವಾಗಿ ಬೆಂಬಲ ನೀಡುತ್ತಿದೆ. 

ಕಳೆದ ಫೆಬ್ರುವರಿಯಲ್ಲಿ ಚೀನಾ ಶಾಂತಿಸ್ಥಾಪನೆ ಯೋಜನೆಯ ಪ್ರಸ್ತಾವನೆ ಮುಂದಿಟ್ಟಿತ್ತು. ಆದರೆ, ಉಕ್ರೇನ್‌ ಮಿತ್ರ‌ ರಾಷ್ಟ್ರಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಮೊದಲು ತಮ್ಮ ಸೇನಾ ಪಡೆಗಳನ್ನು ಉಕ್ರೇನ್‌ ನೆಲದಿಂದ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.