ADVERTISEMENT

ಕ್ರೈಸ್ಟ್‌ಚರ್ಚ್‌ ದಾಳಿ: ಆರೋಪಿ ವಿರುದ್ಧ ಭಯೋತ್ಪಾದನಾ ಪ್ರಕರಣ ದಾಖಲು

ಏಜೆನ್ಸೀಸ್
Published 21 ಮೇ 2019, 17:24 IST
Last Updated 21 ಮೇ 2019, 17:24 IST

ವೆಲ್ಲಿಂಗ್ಟನ್‌: ಮಾರ್ಚ್‌ 15ರಂದು ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ ನಗರದ ಅಲ್‌ನೂರ್‌ ಮತ್ತು ಲಿನ್‌ವುಡ್‌ ಮಸೀದಿಗಳ ಮೇಲೆ ಭೀಕರ ಗುಂಡಿನ ದಾಳಿ ನಡೆಸಿ 51 ಜನರ ಸಾವಿಗೆ ಕಾರಣನಾಗಿದ್ದಆಸ್ಟ್ರೇಲಿಯಾದ ಬ್ರೆಂಟನ್‌ ಟೆರ‍್ರಂಟ್‌ ವಿರುದ್ಧ ಇದೇ ಮೊದಲಬಾರಿಗೆ ಭಯೋತ್ಪಾದನಾ ಪ್ರಕರಣ ದಾಖಲಿಸಲಾಗಿದೆ.

ಬ್ರೆಂಟನ್‌ ವಿರುದ್ಧ 51 ಜನರ ಹತ್ಯೆ ಮತ್ತು 40 ಮಂದಿಯ ಕೊಲೆಯತ್ನ ಪ್ರಕರಣವನ್ನೂ ದಾಖಲಾಗಿದೆ ಎಂದು ನ್ಯೂಜಿಲೆಂಡ್‌ ಪೊಲೀಸರು ತಿಳಿಸಿದ್ದಾರೆ.

ನ್ಯೂಜಿಲೆಂಡ್‌ ಪ್ರಧಾನಿ ಜಸಿಂದಾ ಅರ್ಡೆರ್ನ್‌ ಅವರು ಈ ದಾಳಿಯನ್ನು ‘ಪೂರ್ವನಿಯೋಜಿತ ಭಯೋತ್ಪಾದನಾ ದಾಳಿ’ ಎಂದು ಕರೆದಿದ್ದರು.

ADVERTISEMENT

ನ್ಯೂಜಿಲೆಂಡ್‌ನಲ್ಲಿ 2002ರಿಂದಲೇ ಭಯೋತ್ಪಾದನಾ ನಿಗ್ರಹ ಕಾಯ್ದೆ ಜಾರಿಯಿದ್ದರೂ ಇದರನ್ವಯ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಈ ಮಾದರಿಯ ಪ್ರಕರಣ ಇದೇ ಮೊದಲು.

ದಾಳಿ ನಡೆದು ಎರಡು ತಿಂಗಳುಗಳ ನಂತರ ಆರೋಪಿ ವಿರುದ್ಧ ಭಯೋತ್ಪಾದನಾ ಪ್ರಕರಣ ದಾಖಲಿಸಲಾಗಿದೆ. ಅದಕ್ಕೂ ಮೊದಲು ವಕೀಲರು ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಬ್ರೆಂಟನ್‌ ಟೆರ‍್ರಂಟ್‌ (28) ಸದ್ಯ ಜೈಲಿನಲ್ಲಿದ್ದು, ವೈದ್ಯಕೀಯ ಪರೀಕ್ಷೆ ಎದುರಿಸುತ್ತಿದ್ದಾನೆ. ಜೂನ್‌ 14ರಂದು ಆತನನ್ನು ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.