ADVERTISEMENT

ಅಮೆರಿಕ ಸೇನೆಯ ದಾಳಿಯಿಂದ ಇರಾನ್‌ಗೆ ದೊಡ್ಡ ಆಘಾತ: ಸಿಐಎ ಮುಖ್ಯಸ್ಥ

ಏಜೆನ್ಸೀಸ್
Published 30 ಜೂನ್ 2025, 16:29 IST
Last Updated 30 ಜೂನ್ 2025, 16:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಅಮೆರಿಕ ಸೇನೆಯ ದಾಳಿಯಿಂದ ಇರಾನ್‌ನ ಏಕೈಕ ಲೋಹ (ಧಾತು) ಪರಿವರ್ತಕ  ಮೂಲಸೌಕರ್ಯ ನಾಶವಾಗಿದೆ. ಇದು ಇರಾನ್‌ನ ಪರಮಾಣು ಕಾರ್ಯಕ್ರಮಗಳಿಗೆ ಭಾರಿ ಹೊಡೆತ ತಂದಿದ್ದು, ಇದರಿಂದ ಹೊರಬರಲು ಹಲವು ವರ್ಷಗಳೇ ಬೇಕು ಎಂದು ಅಮೆರಿಕದ ಸಿಐಎ(ಕೇಂದ್ರೀಯ ತನಿಖಾ ಸಂಸ್ಥೆ) ನಿರ್ದೇಶಕ ಜಾನ್‌ ರ್‍ಯಾಟ್‌ಕ್ಲಿಫ್‌ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಸಿಐಎ ಒಂದು ಖಾಸಗಿ (ಅಂತರರಾಷ್ಟ್ರೀಯ) ತನಿಖಾ ಸಂಸ್ಥೆಯಾಗಿದ್ದು, ಅಮೆರಿಕ ಕಾಂಗ್ರೆಸ್‌ಗೆ ಕಳೆದ ವಾರ ನೀಡಿದ ವಿವರಣೆಯಲ್ಲೇ ಸಿಐಎ ಮುಖ್ಯಸ್ಥರು ದಾಳಿ ಕುರಿತ ಸೂಕ್ಷ್ಮ ತನಿಖಾ ಮಾಹಿತಿಗಳನ್ನು ನೀಡಿದ್ದಾರೆ.

ಅಮೆರಿಕ ದಾಳಿಯಿಂದ ಇರಾನ್‌ಗೆ ಎಷ್ಟರ ಮಟ್ಟಿಗೆ ಹಾನಿ ಆಗಿದೆ ಎಂಬ ಪ್ರಶ್ನೆ ಎತ್ತಿದ್ದ ಡೆಮಾಕ್ರೆಟಿಕ್‌ ಜನಪ್ರತಿನಿಧಿಗಳು ಮತ್ತು ಕೆಲವರ ಅನುಮಾನ ದೂರ ಮಾಡುವಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತಕ್ಕೆ ಸಿಐಎ ನಿರ್ದೇಶಕರ ಈ ಹೇಳಿಕೆ ಸಹಕಾರಿಯಾಗಿದೆ.

ADVERTISEMENT

‌‘ಇದು (ದಾಳಿ) ಎಷ್ಟು ವಿನಾಶಕಾರಿಯಾಗಿತ್ತು ಎಂದರೆ ಹಿಂದೆಂದೂ ಯಾರೂ ನೋಡಿಲ್ಲ. ಅವರ (ಇರಾನ್) ಪರಮಾಣು ಯೋಜನೆಯ ಒತ್ತಾಸೆಗೆ ದಾಳಿ ಅಂತ್ಯ ಹಾಡಿತು’ ಎಂದು ‘ಫಾಕ್ಸ್‌ ನ್ಯೂಸ್‌’ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಟ್ರಂ‍ಪ್ ಹೇಳಿದ್ದರು.

‌‘ಇರಾನ್‌ನ ಯುರೇನಿಯಂ ಸಂಗ್ರಹಕ್ಕೆ ಯಾವುದೇ ತೊಂದರೆ ಆಗದಿದ್ದರೂ ಲೋಹ ಪರಿವರ್ತಕ ಸೌಕರ್ಯ ನಾಶವಾಗಿದೆ. ಬಾಂಬ್‌ ತಯಾರಿಸಲು ವರ್ಷಗಳೇ ಬೇಕಾಗಲಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇರಾನ್‌ನ ಪರಮಾಣು ಮೂಲಸೌಕರ್ಯ ಇದ್ದ ಪ್ರದೇಶದ ಮೇಲೆ ಅಮೆರಿಕ ಸೇನೆಯು ಬಂಕರ್‌ ಬಾಂಬ್‌ಗಳು ಮತ್ತು ಟೋಮ್‌ಹಾಕ್ ಕ್ಷಿಪಣಿಗಳ ಮೂಲಕ ದಾಳಿ ಮಾಡಿತ್ತು. ದೊಡ್ಡ ಮಟ್ಟದ ಹಾನಿಯೇನೂ ಆಗಿಲ್ಲ ಎಂದು ಇರಾನ್ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.