ADVERTISEMENT

ಚೀನಾದಲ್ಲಿ ಪೊಲೀಸರ ಮೇಲೆ ಜನರ ರೋಷ, ವಾಹನಗಳ ಧ್ವಂಸ

ಪಿಟಿಐ
Published 29 ಮಾರ್ಚ್ 2020, 1:50 IST
Last Updated 29 ಮಾರ್ಚ್ 2020, 1:50 IST
ಚೀನಾದ ಹುಬೆ ಪ್ರಾಂತ್ಯದಲ್ಲಿ ಸಾರ್ವಜನಿಕರು ಮಾಸ್ಕ್‌ ಧರಿಸಿ ಓಡಾಡುತ್ತಿರುವ ದೃಶ್ಯ ಕಂಡು ಬಂತು – ರಾಯಿರ್ಟಸ್‌ ಚಿತ್ರ
ಚೀನಾದ ಹುಬೆ ಪ್ರಾಂತ್ಯದಲ್ಲಿ ಸಾರ್ವಜನಿಕರು ಮಾಸ್ಕ್‌ ಧರಿಸಿ ಓಡಾಡುತ್ತಿರುವ ದೃಶ್ಯ ಕಂಡು ಬಂತು – ರಾಯಿರ್ಟಸ್‌ ಚಿತ್ರ    

ಬೀಜಿಂಗ್‌: ಕೊರೊನಾ ವೈರಸ್‌ ಮೊದಲು ಪತ್ತೆಯಾದ ಚೀನಾದ ಹುಬೆ ಪ್ರಾಂತ್ಯದಲ್ಲಿ ಜನರು ರೊಚ್ಚಿಗೆದ್ದಿದ್ದಾರೆ. ಈ ಪ್ರಾಂತ್ಯದ ಮೇಲೆ ಹೇರಲಾಗಿದ್ದ ಲಾಕ್‌ಡೌನ್‌ ಅನ್ನು ಇತ್ತೀಚೆಗೆ ತೆರವು ಮಾಡಲಾಗಿತ್ತು. ಹಾಗಾಗಿ, ಜನರು ಸಮೀಪ‍ದ ಜಿಯಾಂಗ್ಸಿ ಪ್ರಾಂತ್ಯಕ್ಕೆ ಹೋಗಲು ಮುಂದಾಗಿದ್ದರು. ಅವರನ್ನು ತಡೆದ ಅಧಿಕಾರಿಗಳ ಮೇಲೆ ಜನರು ಹಲ್ಲೆ ಮಾಡಿದ್ದಾರೆ ಮತ್ತು ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಚೀನಾದಲ್ಲಿ ಜನರು ಈ ರೀತಿ ರೊಚ್ಚಿಗೇಳುವುದು ಅಪರೂ‍‍ಪ.

ಸುಮಾರು 5.6 ಕೋಟಿ ಜನರು ಇರುವ ಹುಬೆ ಪ್ರಾಂತ್ಯವನ್ನು ಜನವರಿ 23ರಿಂದ ಲಾಕ್‌ಡೌನ್‌ ಮಾಡಲಾಗಿತ್ತು. ಅದನ್ನು ತೆರವು ಮಾಡಿದ ಬಳಿಕ ಜನರು ಜಿಯಾಂಗ್ಸಿ ಪ್ರಾಂತ್ಯಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಎರಡೂ ಪ್ರಾಂತ್ಯಗಳನ್ನು ಸಂಪರ್ಕಿಸುವ ಸೇತುವೆ ಬಳಿ ಜನರು ಬಂದಾಗ ಅವರನ್ನು ಪೊಲೀಸರು ತಡೆದಿದ್ದಾರೆ. ಇದು ಜನರ ಸಿಟ್ಟಿಗೆ ಕಾರಣವಾಗಿದೆ. ಎರಡೂ ಪ್ರಾಂತ್ಯಗಳ ಪೊಲೀಸರು ಕೂಡ ವಾಗ್ವಾದ ನಡೆಸಿದ್ದಾರೆ.

ಹಸಿರು ಕಾರ್ಡ್‌ (ಕೊರೊನಾ ಸೋಂಕಿತರ ಜತೆ ಸಂಪರ್ಕಕ್ಕೆ ಬಂದಿಲ್ಲ ಎಂಬ ಪ್ರಮಾಣಪತ್ರ) ಹೊಂದಿರುವ ಜನರು ಹುಬೆ ಪ್ರಾಂತ್ಯದಿಂದ ಹೊರಗೆ ಹೋಗಬಹುದು ಎಂದು ಸರ್ಕಾರ ಇತ್ತೀಚೆಗೆ ಹೇಳಿತ್ತು. ಆದರೆ, ಹುಬೆ ಮತ್ತು ಜಿಯಾಂಗ್ಸಿ ಪ್ರಾಂತ್ಯವನ್ನು ಪ್ರತ್ಯೇಕಿಸುವ ಯಾಂಗ್‌ತ್ಸೆ ನದಿಯ ಸೇತುವೆಯ ಬಳಿಜನರು ಬಂದಾಗ, ಆ ಸೇತುವೆಯನ್ನು ಬಂದ್‌ ಮಾಡಲಾಗಿತ್ತು.

ADVERTISEMENT

ಇದು ತಮ್ಮ ಮೇಲೆ ಕಳಂಕ ಹೊರಿಸುವ ಪ್ರಯತ್ನ ಎಂದು ಹುಬೆ ಪ್ರಾಂತ್ಯದ ಜನರು ಆರೋಪಿಸಿದ್ದಾರೆ.

ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದ ಜನರನ್ನು ಪೊಲೀಸರು ನಿಲ್ಲಿಸಿದಾಗ, ಜನರು ವಾಹನಗಳನ್ನು ಪುಡಿಗಟ್ಟಿ ರೋಷ ಹೊರಹಾಕಿದ್ದಾರೆ. ಈ ದೃಶ್ಯಗಳಿರುವ ವಿಡಿಯೊಗಳು ಅಂತರ್ಜಾಲದಲ್ಲಿ ಪ್ರಕಟವಾಗಿವೆ.

ಸಂಘರ್ಷ ಹೇಗೆ ಆರಂಭವಾಯಿತು ಎಂಬುದು ಸ್ಪಷ್ಟವಾಗಿಲ್ಲ. ಎರಡೂ ಪ್ರಾಂತ್ಯಗಳ ಪೊಲೀಸರು ಸಂಘರ್ಷದ ಬಗ್ಗೆ ತಮ್ಮದೇ ಹೇಳಿಕೆಗಳನ್ನು ಆನ್‌ಲೈನ್‌ನಲ್ಲಿ ಹಾಕಿದ್ದರು. ತಕ್ಷಣವೇ ಅದನ್ನು ಅಳಿಸಿ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.