ADVERTISEMENT

ಕಲ್ಲಿದ್ದಲು ಬಳಕೆ ಸಂಪೂರ್ಣ ನಿಗ್ರಹಿಸುವ ಪ್ರಸ್ತಾವ ಕೈಬಿಟ್ಟ ಗ್ಲಾಸ್ಗೊ ಶೃಂಗ

ಭಾರತ ಮುಂದಿಟ್ಟ ಪ್ರಸ್ತಾವಕ್ಕೆ ಮಣೆ– ಹಲವು ದೇಶಗಳಿಂದ ಟೀಕೆ

ಪಿಟಿಐ
Published 14 ನವೆಂಬರ್ 2021, 7:39 IST
Last Updated 14 ನವೆಂಬರ್ 2021, 7:39 IST
ಗ್ಲಾಸ್ಗೊದಲ್ಲಿ ನಡೆದ ಪ್ರತಿಭಟನೆ
ಗ್ಲಾಸ್ಗೊದಲ್ಲಿ ನಡೆದ ಪ್ರತಿಭಟನೆ   

ಲಂಡನ್‌: ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆಯುತ್ತಿದ್ದವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಗೆ (ಸಿಒಪಿ26) ತೆರೆ ಬಿದ್ದಿದ್ದು, ಕಲ್ಲಿದ್ದಲಿನಂತಹ ದಹನ ಇಂಧನಬಳಕೆ ಪ್ರಮಾಣವನ್ನು ಸಂಪೂರ್ಣವಾಗಿ ತೊಡೆದು ಹಾಕುವ ಬದಲಿಗೆ ಅದರ ಬಳಕೆಯನ್ನು ಹಂತ ಹಂತವಾಗಿ ಕಡಿಮೆಗೊಳಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.

ಶೃಂಗಸಭೆಯ ಕೊನೆಯಲ್ಲಿ ಕೈಗೊಂಡ ನಿರ್ಣಯದಲ್ಲಿ ಭಾರತ ಪ್ರಸ್ತಾಪಿಸಿದ ಈ ಅಂಶಕ್ಕೆ ಒತ್ತು ನೀಡಲಾಯಿತು. ಈ ಮೂಲಕ ಇದೇ ಪ್ರಥಮ ಬಾರಿಗೆ ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡುವ ಇಂಗಾಲದ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಯೋಜನೆಯೊಂದನ್ನು ರೂಪಿಸಿ ಅನಮೋದಿಸಿದಂತಾಗಿದೆ.

200ಕ್ಕೂ ಅಧಿಕ ದೇಶಗಳು ಪಾಲ್ಗೊಂಡ ಈ ಶೃಂಗಸಭೆ ಮುಂದಿನ ವರ್ಷ ಮತ್ತೆ ಸಭೆ ಸೇರಲು ಒಪ್ಪಿಕೊಂಡಿತು ಹಾಗೂ ಇಂಗಾಲದ ಹೊರಸೂಸುವ ಪ್ರಮಾಣವನ್ನು ತಗ್ಗಿಸಿ, ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೇ ಸೀಮಿತಗೊಳಿಸುವ ಗುರಿ ಈಡೇರಿಕೆಗೆ ಪ್ರಯತ್ನ ಮುಂದುವರಿಸಲು ವಾಗ್ದಾನ ಮಾಡಿತು.

ADVERTISEMENT

‘ಇದೀಗ ನಾವೊಂದು ನಿರ್ಧಾರಕ್ಕೆ ಬಂದಿದ್ದೇವೆ. ಭೂಮಿಗಾಗಿ ನಾವೆಲ್ಲ ಒಂದಾಗಿ ಕೆಲವು ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಸಿಒಪಿ26 ಶೃಂಗಸಭೆಯ ಅಧ್ಯಕ್ಷ ಅಲೋಕ್‌ ಶರ್ಮಾ ಹೇಳಿದರು.

ಭೂಪೇಂದರ್ ಯಾದವ್‌ ಪ್ರಭಾವ: ಶೃಂಗಸಭೆಯಲ್ಲಿ ಭಾರತದ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದ ಪರಿಸರ ಸಚಿವ ಭೂಪೇಂದರ್ ಯಾದವ್‌, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ದಹನ ಇಂಧನವನ್ನು ಜವಾಬ್ದಾರಿಯಿಂದ ಹೇಗೆ ಬಳಸಬೇಕು ಎಂಬುದು ತಿಳಿದಿದೆ, ಬಡಜನರ ಜೀವನ ಮಟ್ಟ ಸುಧಾರಣೆಗಾಗಿ ಕಲ್ಲಿದ್ದಲನ್ನು ಮುಂದೆಯೂ ಬಳಸುವುದು ಅಗತ್ಯವಾಗಿದೆ. ಆದರೆ ಅದರ ಬಳಕೆಯನ್ನು ಹಂತ ಹಂತವಾಗಿ ಮಿತಗೊಳಿಸಬೇಕಾಗಿದೆ’ ಎಂದು ಹೇಳಿದ್ದರು.

ಶ್ರೀಮಂತ ರಾಷ್ಟ್ರಗಳ ಜನರ ಸುಸ್ಥಿರವಲ್ಲದ ಜೀವನ ಕ್ರಮ ಮತ್ತು ವ್ಯರ್ಥ ಮಾಡುವ ಮನೋಭಾವದಿಂದಾಗಿಯೇ ಜಾಗತಿಕ ತಾಪಮಾನದಲ್ಲಿ ಏರಿಕೆ ಉಂಟಾಗಿದೆ ಎಂದು ಅವರು ಪ್ರಬಲವಾಗಿ ಪ್ರತಿಪಾದಿಸಿದ್ದರು. ಭಾರತದ ಈ ನಿಲುವನ್ನು ಇರಾನ್ ಪ್ರಬಲವಾಗಿ ಬೆಂಬಲಿಸಿತ್ತು.

ಟೀಕೆ: ಕಲ್ಲಿದ್ದಲು ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸದೆ, ಹಂತ ಹಂತವಾಗಿ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ ಮುಂದಿಟ್ಟ ಪ್ರಸ್ತಾವವನ್ನು ಶೃಂಗಸಭೆಯಲ್ಲಿ ಅನುಮೋದಿಸಿದ್ದಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.

ಕಲ್ಲಿದ್ದಲಿನ ವಿಚಾರದಲ್ಲಿ ಶೃಂಗಸಭೆಯ ಭಾಷೆಯೇ ಕೊನೆಯ ಕ್ಷಣದಲ್ಲಿ ಬದಲಾಗಿದ್ದಕ್ಕೆ ಹಲವು ದೇಶಗಳು ಅದರಲ್ಲೂ ಮುಖ್ಯವಾಗಿ ಸಣ್ಣ ದೇಶಗಳು ಹಾಗೂ ದ್ವೀಪರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ. ಆಕ್ಷೇಪಿಸಿದ ರಾಷ್ಟ್ರಗಳಲ್ಲಿ ಆಸ್ಟ್ರೇಲಿಯಾ, ಸ್ವಿಟ್ಜರ್ಲೆಂಡ್‌ ಪ್ರಮುಖವಾಗಿವೆ. ಚೀನಾವು ಶೃಂಗಸಭೆಯ ನಿರ್ಧಾರವನ್ನು ಸ್ವಾಗತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.