ಲಂಡನ್: ಭಾರತದ ಸಂವಿಧಾನವು ಸಾಮಾಜಿಕ ದಾಖಲೆ. ಅದು ಕೇವಲ ತೋರ್ಪಡಿಕೆಗಾಗಿ ‘ಎಲ್ಲರೂ ಸಮಾನರು’ ಎಂದು ಹೇಳುವುದಿಲ್ಲ. ಬದಲಾಗಿ ಅಧಿಕಾರದ ಮರುಮಾಲ್ಯಮಾಪನ ಮಾಡಲು ಮತ್ತು ಘನತೆಯನ್ನು ಮರುಸ್ಥಾಪಿಸಲು ಮಧ್ಯಪ್ರವೇಶಿಸುವಷ್ಟು ಗಟ್ಟಿತನವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದರು.
‘ಸಂವಿಧಾನವು ಕೇವಲ ಕಾನೂನು ಅಥವಾ ರಾಜಕೀಯ ಚೌಕಟ್ಟು ಅಲ್ಲ; ಅದು ಒಂದು ಭಾವನೆ, ಜೀವಸೆಲೆ, ಶಾಯಿಯಲ್ಲಿ ಕೆತ್ತಿದ ಶಾಂತ ಸ್ವರೂಪದ ಕ್ರಾಂತಿ’ ಎಂದು ಅವರು ಬಣ್ಣಿಸಿದರು.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ, ‘ಪ್ರಾತಿನಿಧ್ಯದಿಂದ ಪರಿವರ್ತನೆಯೆಡೆಗೆ: ಸಂವಿಧಾನದ ವಿಶ್ವಾಸಾರ್ಹತೆಯ ಸಾಕಾರ’ ಎಂಬ ವಿಷಯ ಕುರಿತು ಮಂಗಳವಾರ ಅವರು ಮಾತನಾಡಿದರು. ಮುನ್ಸಿಪಲ್ ಶಾಲೆಯಿಂದ ಸುಪ್ರೀಂ ಕೋರ್ಟ್‌ನ ಅತ್ಯುನ್ನತ ಹುದ್ದೆಯವರೆಗಿನ ತಮ್ಮ ಜೀವನದ ಪಯಣವನ್ನೇ ಉಲ್ಲೇಖಿಸಿ, ತಳ ಸಮುದಾಯಗಳ ಮೇಲೆ ಸಂವಿಧಾನದ ಸಕಾರಾತ್ಮಕ ಪರಿಣಾಮವನ್ನು ಒತ್ತಿ ಹೇಳಿದರು.
‘ಹಲವು ದಶಕಗಳ ಹಿಂದೆ ಭಾರತದ ಲಕ್ಷಾಂತರ ನಾಗರಿಕರನ್ನು ‘ಅಸ್ಪೃಶ್ಯರು’ ಎಂದು ಕರೆಯಲಾಗುತ್ತಿತ್ತು. ಅವರನ್ನು ಅಶುದ್ಧರು ಎನ್ನಲಾಗುತ್ತಿತ್ತು. ಅವರು ತಮಗಾಗಿ ಧ್ವನಿ ಎತ್ತುವಂತಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ನಾವು ಇಲ್ಲಿದ್ದೇವೆ. ಅದೇ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ದೇಶದ ನ್ಯಾಯಾಂಗದ ಅತ್ಯುನ್ನತ ಹುದ್ದೆಯನ್ನು ಹೊಂದಿ, ಮುಕ್ತವಾಗಿ ಮಾತನಾಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.