ADVERTISEMENT

ಕೊರೊನಾ | ಸಾವಿನ ಸಂಖ್ಯೆ ಹೆಚ್ಚುವ ಭೀತಿ: 654 ಭಾರತೀಯರ ಸ್ಥಳಾಂತರ

ಯುಎಇಯ ಐವರಲ್ಲಿ ಸೋಂಕು ಪತ್ತೆ * 25 ರಾಷ್ಟ್ರಗಳಿಗೆ ವ್ಯಾಪಿಸಿದ ವೈರಸ್‌

ಪಿಟಿಐ
Published 2 ಫೆಬ್ರುವರಿ 2020, 17:00 IST
Last Updated 2 ಫೆಬ್ರುವರಿ 2020, 17:00 IST
ಚೀನಾದ ವುಹಾನ್‌ ನಗರದಿಂದ ಏರ್‌ ಇಂಡಿಯಾ ವಿಮಾನದಲ್ಲಿ ಭಾನುವಾರ ಕರೆದುಕೊಂಡು ಬಂದಿರುವ ಭಾರತೀಯರನ್ನು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ವೈದ್ಯರ ತಂಡ ತಪಾಸಣೆಗೊಳಪಡಿಸಿತು –ಪಿಟಿಐ ಚಿತ್ರ
ಚೀನಾದ ವುಹಾನ್‌ ನಗರದಿಂದ ಏರ್‌ ಇಂಡಿಯಾ ವಿಮಾನದಲ್ಲಿ ಭಾನುವಾರ ಕರೆದುಕೊಂಡು ಬಂದಿರುವ ಭಾರತೀಯರನ್ನು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ವೈದ್ಯರ ತಂಡ ತಪಾಸಣೆಗೊಳಪಡಿಸಿತು –ಪಿಟಿಐ ಚಿತ್ರ   

ಬೀಜಿಂಗ್‌: ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಚೀನಾ ಸಮರೋಪಾದಿಯಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ.

ಈ ಸೋಂಕಿನಿಂದ ಈಗಾಗಲೇ 304 ಜನರು ಮೃತಪಟ್ಟಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

‘ಮುಂದಿನ ಎರಡು ವಾರಗಳ ಅವಧಿಯಲ್ಲಿ ಸಾವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳ ಕಂಡು ಬರುವ ಸಾಧ್ಯತೆ ಇದೆ’ ಎಂದು ಚೀನಾ ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಹೊಸ ವರ್ಷದ ರಜಾ ದಿನಗಳಲ್ಲಿ ಹುಬೇ ಪ್ರಾಂತ್ಯ, ವಿಶೇಷವಾಗಿ ವುಹಾನ್‌ ನಗರದಿಂದ ಲಕ್ಷಾಂತರ ಜನರು ವಿದೇಶಗಳಿಗೆ ಪ್ರವಾಸಕ್ಕಾಗಿ ತೆರಳಿದ್ದರು. ಈಗ ಅವರೆಲ್ಲಾ ಮರಳಿರುವುದು ಈ ಆತಂಕಕ್ಕೆ ಕಾರಣ’ ಎಂದು ಅವರು ವಿಶ್ಲೇಷಿಸಿದ್ದಾರೆ.

ವಿದ್ಯಾರ್ಥಿಗಳ ಸ್ಥಳಾಂತರ ಇಲ್ಲ: ಪಾಕ್‌

ವುಹಾನ್‌ನಲ್ಲಿರುವ ತಮ್ಮನ್ನು ತವರಿಗೆ ಸ್ಥಳಾಂತರಿಸುವಂತೆ ವಿದ್ಯಾರ್ಥಿಗಳ ಮನವಿಯನ್ನು ಪಾಕಿಸ್ತಾನ ಸರ್ಕಾರ ತಳ್ಳಿಹಾಕಿದೆ.

‘ವುಹಾನ್‌ನಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಇದೆ. ಇಂತಹ ಸೌಲಭ್ಯ ಪಾಕಿಸ್ತಾನದಲ್ಲಿ ಸಿಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು’ ಎಂದು ಚೀನಾದಲ್ಲಿರುವ ಪಾಕಿಸ್ತಾನದ ರಾಯಭಾರಿ ನಗ್ಮಾನಾ ಹಾಶ್ಮಿ ಭಾನುವಾರ ಹೇಳಿದ್ದಾರೆ.

ಆನೈಲೈನ್‌ಗೆ ಮೊರೆ: ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ವಿದೇಶಾಂಗ ಸಚಿವಾಲಯವು ಆನ್‌ಲೈನ್‌ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡುವುದಾಗಿ ಘೋಷಿಸಿದೆ.

ಕೇರಳ: 1,793 ಜನರ ಮೇಲೆ ನಿಗಾ

ವಿಶ್ವವನ್ನೇ ಭೀತಿಯ ಕೂಪಕ್ಕೆ ತಳ್ಳಿರುವ ಕೊರೊನಾ ವೈರಸ್‌ ಸೋಂಕು ಕೇರಳದಲ್ಲಿಯೂ ಆತಂಕ ಸೃಷ್ಟಿಸಿದೆ.

ಕೊರೊನಾವೈರಸ್‌ ಸೋಂಕಿಗೆ ತುತ್ತಾಗಿರುವ ಪ್ರದೇಶಗಳಿಗೆ ಭೇಟಿ ನೀಡಿರುವ ರಾಜ್ಯದ 1,793 ಜನರನ್ನು ಗುರುತಿಸಿ, ಅವರ ಮೇಲೆ ನಿಗಾ ಇಡಲಾಗಿದೆ. ಈ ಪೈಕಿ 70 ಜನರನ್ನು ಆಯ್ದ ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ ಪ್ರತ್ಯೇಕ ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಿಸಲಾಗಿದೆ ಎಂದು ಕೇರಳದ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

‘ಚೀನಾದಿಂದ ವಾಪಸಾಗಿರುವ ವಿದ್ಯಾರ್ಥಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದಾಗಿ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ತಜ್ಞರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ, ಪ್ರಯೋಗಾಲಯದ ವರದಿ ಬಂದ ನಂತರವಷ್ಟೇ ಸೋಂಕಿನ ತೀವ್ರತೆ ಬಗ್ಗೆ ತಿಳಿಯಲಿದೆ’ ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.