ADVERTISEMENT

ಕೊರೊನಾ ಹರಡುವಿಕೆ ಒಳಾಂಗಣದಲ್ಲೇ ಹೆಚ್ಚು: ಹೊಸ ಅಧ್ಯಯನ

ಪಿಟಿಐ
Published 9 ಜೂನ್ 2021, 14:28 IST
Last Updated 9 ಜೂನ್ 2021, 14:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಮಾಸ್ಕ್‌ ಧರಿಸದೆ ಒಳಾಂಗಣಗಳಲ್ಲಿ ಮಾತನಾಡುವುದರಿಂದ ಕೋವಿಡ್‌ 19 ಹರಡುವಿಕೆಯ ಅಪಾಯ ಹೆಚ್ಚಿದೆ ಎಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಮಾತನಾಡುವಾಗ ಹೊರಸೂಸುವ ವಿಭಿನ್ನ ಗಾತ್ರದ ಉಗುಳು ಯಾವ ಗಾತ್ರಗಳನ್ನು ಹೊಂದಿರುತ್ತವೆ ಮತ್ತು ವಿವಿಧ ಪ್ರಮಾಣದ ವೈರಸ್‌ಗಳನ್ನು ಹೇಗೆ ಸಾಗಿಸಬಲ್ಲವು ಎಂಬುದನ್ನು ಜರ್ನಲ್ ಆಫ್ ಇಂಟರ್ನಲ್ ಮೆಡಿಸಿನ್‌ ಜರ್ನಲ್‌ನಲ್ಲಿ ಮಂಗಳವಾರ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ಈ ಅಧ್ಯಯನ ನಡೆಸಿರುವ ಸಂಶೋಧಕರ ಪ್ರಕಾರ, ಮಧ್ಯಮ ಗಾತ್ರದ ಉಗುಳ ಹನಿಗಳು ಕೆಲವೇ ನಿಮಿಷಗಳಲ್ಲಿ ಗಾಳಿಯಲ್ಲಿ ನಿಷ್ಕ್ರಿಯವಾಗುತ್ತವೆ. ಆದರೆ ಈ ಹನಿಗಳು ಗಾಳಿಯಲ್ಲಿ ಸಾಕಷ್ಟು ದೂರದವರೆಗೆ ಸಾಗುತ್ತವೆ.

ADVERTISEMENT

ಅಲ್ಲದೆ, ಮುಚ್ಚಿದ ಪರಿಸರದಲ್ಲಿ ಸಿಡಿಯುವ ಉಗುಳಿನ ಹನಿಗಳು ಗಾಳಿಯಲ್ಲಿ ಹೆಚ್ಚು ಶೇಖರಣೆಯಾಗುತ್ತವೆ ಮತ್ತು ಹೆಚ್ಚು ಗಂಭೀರ ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಸೋಂಕಿನ ಅಪಾಯ ಹೆಚ್ಚಿಸಬಹುದು.

‘ಜನರು ಮಾತನಾಡುವಾಗ ಕೆಲವು ಉಗುಳು ಹನಿಗಳು ಹಾರುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಬರಿಗಣ್ಣಿನಿಂದ ನೋಡಲಾಗದಷ್ಟು ಚಿಕ್ಕದಾದ ಇನ್ನೂ ಸಾವಿರಾರು ಸಂಖ್ಯೆಯ ಉಗುಳ ಹನಿಗಳು ಅದರಲ್ಲಿರುತ್ತವೆ’ ಎಂದು ಅಮೆರಿಕದ ಮಧುಮೇಹ ಮತ್ತು ಜೀರ್ಣಾಂಗ ಮತ್ತು ಮೂತ್ರಪಿಂಡ ಕಾಯಿಲೆಗಳ ರಾಷ್ಟ್ರೀಯ ಸಂಸ್ಥೆಯ ಆಡ್ರಿಯಾನ್ ಬಾಕ್ಸ್ ಹೇಳಿದ್ದಾರೆ.

‘ಮಾತನಾಡುವಾಗ ಉತ್ಪತ್ತಿಯಾಗುವ ಉಗುಳಿನ ಹನಿಗಳಲ್ಲಿ ವೈರಸ್‌ ಸಮೃದ್ಧ ಸಂಖ್ಯೆಯಲ್ಲಿರುತ್ತವೆ. ಉಗುಳ ಹನಿಗಳ ನೀರು ಆವಿಯಾದರೂ ವೈರಸ್‌ ಹೊಗೆಯಂತೆ ನಿಮಿಷಗಳ ಕಾಲ ಗಾಳಿಯಲ್ಲಿ ತೇಲುತ್ತವೆ. ಇದರಿಂದಾಗಿ ಇತರರು ಅಪಾಯಕ್ಕೆ ಸಿಲುಕುತ್ತಾರೆ’ ಎಂದು ಅಧ್ಯಯನ ವರದಿಯ ಹಿರಿಯ ಲೇಖಕ ಬಾಕ್ಸ್ ಹೇಳಿದ್ದಾರೆ.

ಕೋವಿಡ್‌ 19 ವೈರಸ್‌ ಗಾಳಿಯಲ್ಲಿ ಹರಡುವುದಷ್ಟೇ ಅಲ್ಲ, ಒಳಾಂಗಣಗಳಲ್ಲಿ ಮಾಸ್ಕ್‌ಧರಿಸದೆ ಮಾತನಾಡುವುದು ಇತರರಿಗೆ ಹೆಚ್ಚು ಅಪಾಯ ಉಂಟು ಮಾಡುತ್ತದೆ ಎಂದು ಈ ಅಧ್ಯಯನದಲ್ಲಿ ತೀರ್ಮಾನಕ್ಕೆ ಬರಲಾಗಿದೆ.

‘ಒಳಾಂಗಣದಲ್ಲಿ ಆಗಾಗ್ಗೆ ತಿನ್ನುವುದು ಮತ್ತು ಕುಡಿಯುವುದು, ಸಾಮಾನ್ಯವಾಗಿ ಜೋರಾಗಿ ಮಾತನಾಡುವುದು ನಡೆಯುತ್ತದೆ. ಒಳಾಂಗಣದಲ್ಲೇ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಇರುವುದರಿಂದ ಇವು ವೈರಸ್‌ಗಳನ್ನು ಶರವೇಗದಲ್ಲಿ ಹರಡುವ ಕೇಂದ್ರಬಿಂದುಗಳಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ’ ಎಂದು ಈ ಅಧ್ಯಯನದ ಲೇಖಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.