ADVERTISEMENT

6 ಕೋಟಿ ಜನರನ್ನು 'ಅತಿ ಬಡತನ'ಕ್ಕೆ ದೂಡಲಿದೆ ಕೊರೊನಾ: ವಿಶ್ವಬ್ಯಾಂಕ್

ಏಜೆನ್ಸೀಸ್
Published 20 ಮೇ 2020, 7:35 IST
Last Updated 20 ಮೇ 2020, 7:35 IST
ಪಂಜಾಬ್‌ನ ಅಮೃತಸರದಿಂದ ಉತ್ತರ ಪ್ರದೇಶಕ್ಕೆ ತೆರಳಲು ರೈಲಿಗಾಗಿ ಕಾಯುತ್ತಿದ್ದ ವಲಸೆ ಕಾರ್ಮಿಕರೊಬ್ಬರ ತೊಡೆಯ ಮೇಲಿದ್ದ ಮಗು (ಎಎಫ್‌ಪಿ ಚಿತ್ರ)
ಪಂಜಾಬ್‌ನ ಅಮೃತಸರದಿಂದ ಉತ್ತರ ಪ್ರದೇಶಕ್ಕೆ ತೆರಳಲು ರೈಲಿಗಾಗಿ ಕಾಯುತ್ತಿದ್ದ ವಲಸೆ ಕಾರ್ಮಿಕರೊಬ್ಬರ ತೊಡೆಯ ಮೇಲಿದ್ದ ಮಗು (ಎಎಫ್‌ಪಿ ಚಿತ್ರ)   

ವಾಷಿಂಗ್ಟನ್: ಕೋವಿಡ್-19 ಪಿಡುಗುವಿಶ್ವದ ವಿವಿಧ ದೇಶಗಳಲ್ಲಿ 6 ಕೋಟಿ ಮಂದಿಯನ್ನು 'ಅತಿ ಬಡತನ'ಕ್ಕೆ ದೂಡಲಿದೆ ಎಂದು ವಿಶ್ವಬ್ಯಾಂಕ್ ಮುಖ್ಯಸ್ಥರು ವಿಶ್ಲೇಷಿಸಿದ್ದಾರೆ. ಕಳೆದ ಮೂರು ವರ್ಷಗಳ ದುಡಿಮೆಯನ್ನು ಈ ಪಿಡುಗು ಕಿತ್ತುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ 100 ದೇಶಗಳಲ್ಲಿ ವಿಶ್ವಬ್ಯಾಂಕ್ ವಿವಿಧ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದೆ. ಮುಂದಿನ 15 ತಿಂಗಳಿನಲ್ಲಿ 160 ಶತಕೋಟಿ ಡಾಲರ್ ಮೊತ್ತವನ್ನು ವಿವಿಧ ದೇಶಗಳಲ್ಲಿ ವಿನಿಯೋಗಿಸಲಿದೆ. ವಿಶ್ವದ ಶೇ 70ರಷ್ಟು ಜನಸಂಖ್ಯೆ ಈ ದೇಶಗಳಲ್ಲಿದೆಎಂದು ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಕಾನ್ಫರೆನ್ಸ್ ಕಾಲ್‌ನಲ್ಲಿಹೇಳಿದರು.

ವಿಶ್ವದ ಆರ್ಥಿಕತೆ ಈ ವರ್ಷ ಶೇ 5ರಷ್ಟು ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟ ಮಲ್ಪಾಸ್, ಬಡ ದೇಶಗಳ ಮೇಲೆ ಈ ಪರಿಣಾಮ ಕೆಟ್ಟದಾಗಿರಲಿದೆ ಎಂದು ಹೇಳಿದರು.

ADVERTISEMENT

'ಕಳೆದ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನ ಕಾರ್ಯಕ್ರಮಗಳ ಮೂಲಕ ಸಾಧಿಸಲಾದ ಪ್ರಗತಿಯನ್ನು ಕೊರೊನಾ ಕೊಚ್ಚಿ ಹಾಕಲಿದೆ. ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತ ನಮ್ಮನ್ನು ಕಾಡಲಿದೆ' ಎಂದು ಮಾಲ್ಪಾಸ್ ಅಭಿಪ್ರಾಯಪಟ್ಟರು.

ವಿಶ್ವದ ವಿವಿಧೆಡೆ ಸುಮಾರು 50 ಲಕ್ಷ ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈವರೆಗೆ ಸುಮಾರು 3 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಚೀನಾನದಲ್ಲಿ 2019ರ ಕೊನೆಯ ದಿನಗಳಲ್ಲಿ ಕಾಣಿಸಿಕೊಂಡಿತ್ತು.

ಬಡ ದೇಶಗಳಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸಲು, ಆರ್ಥಿಕ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ವಿಶ್ವಬ್ಯಾಂಕ್ ಈವರೆಗೆ 5.5 ಶತಕೋಟಿ ಡಾಲರ್ ವ್ಯಯಿಸಿದೆ.

ಬಡ ರಾಷ್ಟ್ರಗಳಿಗೆ ಕೇವಲ ವಿಶ್ವಬ್ಯಾಂಕ್‌ ನೆರವು ನೀಡಿದರೆ ಅವುಗಳ ಪರಿಸ್ಥಿತಿಸುಧಾರಿಸುವುದಿಲ್ಲ. ಶ್ರೀಮಂತ ದೇಶಗಳು ದ್ವಿಪಕ್ಷೀಯ ಸಹಕಾರಕ್ಕೆ ಒತ್ತು ನೀಡಿ, ಬಡ ದೇಶಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು ಎಂದು ಮಾಲ್ಪಾಸ್ ಸಲಹೆ ಮಾಡಿದರು.

ಬೇರೆ ದೇಶಗಳಿಗೆ ಹೋಗಿರುವಕಾರ್ಮಿಕರು ಅಲ್ಲಿಂದ ದುಡಿದು ಕಳಿಸುವ ಹಣ ಮತ್ತು ಪ್ರವಾಸೋದ್ಯಮ ಆದಾಯಗಳು ಅಭಿವೃದ್ಧಿಶೀಲ ದೇಶಗಳ ಮುಖ್ಯ ಆದಾಯದ ಮೂಲ. ಆರ್ಥಿಕತೆಯ ಪುನಶ್ಚೇತನಕ್ಕೆ ಇದು ಅನಿವಾರ್ಯ ಎಂದು ಅವರು ತಿಳಿಸಿದರು.

ಅಭಿವೃದ್ಧಿ ಪ್ರಮಾಣ ಕಡಿಮೆಯಿರುವ ದೇಶಗಳಿಗೆ ನೀಡಿರುವ ಸಾಲದ ಮರುಪಾವತಿ ಕಂತನ್ನು ಒಂದು ವರ್ಷದ ಅವಧಿಗೆ ಮುಂದೂಡುವ ಪ್ರಸ್ತಾವಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಈವರೆಗೆ 14 ದೇಶಗಳು ಈ ಪ್ರಸ್ತಾವವನ್ನು ಅನುಮೋದಿಸಿವೆ. ಉಳಿದ ದೇಶಗಳಿಂದ ಆಶಾದಾಯಕ ಸ್ಪಂದನೆ ವ್ಯಕ್ತವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.