ADVERTISEMENT

ವಿಶ್ವಸಂಸ್ಥೆ ಅಧಿವೇಶನಕ್ಕೆ ‘ಕೋವಿಡ್‌’ ಭೀತಿ

ಅಮೆರಿಕದಲ್ಲಿ ಆರು ಮಂದಿ ಸಾವು, 90ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು: ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:37 IST
Last Updated 3 ಮಾರ್ಚ್ 2020, 19:37 IST
a
a   

ವಿಶ್ವಸಂಸ್ಥೆ,ವಾಷಿಂಗ್ಟನ್‌, ಸೋಲ್‌: ಜಾಗತಿಕವಾಗಿ ವ್ಯಾಪಿಸಿರುವ ’ಕೋವಿಡ್‌–19‘ ವಿಶ್ವಸಂಸ್ಥೆಯ 64ನೇ ವಾರ್ಷಿಕ ಅಧಿವೇಶನದ ಮೇಲೆಯೂ ಪರಿಣಾಮ ಬೀರಿದೆ.

ಮಾರ್ಚ್‌ 9ರಿಂದ 20ರವರೆಗೆ ನಡೆಯಬೇಕಾಗಿದ್ದ ಅಧಿವೇಶನವನ್ನು ವೈರಸ್‌ ಭೀತಿಯಿಂದಾಗಿ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.

’ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ‘ ವಿಷಯಗಳ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. 193 ಸದಸ್ಯ ರಾಷ್ಟ್ರಗಳು ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿವೆ. ಆದರೆ, ವೈರಸ್‌ ಭೀತಿಯಿಂದ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಲು ನಿರ್ಧರಿಸಲಾಗಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಇರುವ ನ್ಯೂಯಾರ್ಕ್‌ನಲ್ಲಿ ಒಬ್ಬರು ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ.

ADVERTISEMENT

‘ಕೋವಿಡ್‌–19’ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚರ್ಚಿಸುವ ಉದ್ದೇಶ ಇಲ್ಲ’ ಎಂದು ವಿಶ್ವಸಂಸ್ಥೆಯ ಚೀನಾದ ರಾಯಭಾರಿ ಝಾಂಗ್‌ ಜುನ್‌ ತಿಳಿಸಿದ್ದಾರೆ.

‘ಆತಂಕ ಬೇಡ. ವೈರಸ್‌ ಸೋಂಕು ಹರಡುತ್ತಿರುವುದನ್ನು ನಿಯಂತ್ರಿಸಲು ಚೀನಾ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ಉತ್ತಮ ಫಲಿತಾಂಶ ದೊರೆತಿದೆ. ಪರಿಸ್ಥಿತಿ ಈಗ ಸುಧಾರಿಸುತ್ತಿದೆ‘ ಎಂದು ಹೇಳಿದ್ದಾರೆ.

’ಕೋವಿಡ್‌–19‘ ವೈರಸ್‌ ಸೋಂಕಿನಿಂದ ಅಮೆರಿಕದಲ್ಲಿ ಸಾವಿಗೀಡಾದವರ ಸಂಖ್ಯೆ ಆರಕ್ಕೇರಿದೆ.

90ಕ್ಕೂ ಹೆಚ್ಚು ಮಂದಿಯಲ್ಲಿ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ಸಾವಿಗೀಡಾದವರೆಲ್ಲರೂ ವಾಷಿಂಗ್ಟನ್‌ ರಾಜ್ಯದವರಾಗಿದ್ದಾರೆ ಎಂದು ಉಪಾಧ್ಯಕ್ಷ ಮೈಕ್‌ ಪೆನ್ಸ್‌ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉಪಾಧ್ಯಕ್ಷ ಪೆನ್ಸ್‌ ಅವರು ಹಿರಿಯ ಅಧಿಕಾರಿಗಳು ಮತ್ತು ಫಾರ್ಮಾ ಕಂಪನಿಗಳ ಮುಖ್ಯಸ್ಥರ ಜತೆ ವೈರಸ್‌ ಹರಡುತ್ತಿರುವ ಕುರಿತು ಸಮಾಲೋಚನೆ ನಡೆಸಿದರು.

’ವೈರಸ್‌ ಹಬ್ಬದಂತೆ ಗಡಿಗಳನ್ನು ಮುಚ್ಚಲಾಗಿದೆ. ತಪಾಸಣೆಯನ್ನು ಹೆಚ್ಚಿಸಲಾಗಿದೆ. ಪ್ರವಾಸಕ್ಕೂ ನಿರ್ಬಂಧಗಳನ್ನು ವಿಧಿಸಲಾಗಿದೆ‘ ಎಂದು ಟ್ರಂಪ್‌ ಸಭೆಯಲ್ಲಿ ತಿಳಿಸಿದರು.

’ಹಲವು ಕಂಪನಿಗಳು ವೈರಸ್ ನಿಯಂತ್ರಿಸುವ ಬಗ್ಗೆ ಸಂಶೋಧನೆಯಲ್ಲಿ ತೊಡಗಿವೆ. ಮುಂದಿನ ಆರು ವಾರಗಳಲ್ಲಿ ಲಸಿಕೆಗಳ ಪ್ರಾಯೋಗಿಕ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಆದರೆ, ಈ ವರ್ಷದ ಅಂತ್ಯಕ್ಕೆ ಲಸಿಕೆ ಲಭ್ಯವಾಗುವುದಿಲ್ಲ. ಕೋವಿಡ್‌ನಿಂದ ಅಮೆರಿಕನ್ನರಿಗೆ ಹೆಚ್ಚಿನ ಅಪಾಯವಿಲ್ಲ. ಜನರು ಆತಂಕ ಪಡುವುದು ಬೇಡ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲ ದೇಶಗಳ ಜತೆ ಸಂಪರ್ಕದಲ್ಲಿದ್ದೇವೆ‘ ಎಂದು ಪೆನ್ಸ್‌ ತಿಳಿಸಿದ್ದಾರೆ.

ಅಮೆರಿಕದ ಕಂಪನಿಗಳು ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸುವ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ಒಕ್ಕೂಟವನ್ನು ರಚಿಸಿಕೊಂಡಿವೆ.

ಇದುವರೆಗೆ 67 ದೇಶಗಳಲ್ಲಿ ವೈರಸ್‌ ಸೋಂಕು ವ್ಯಾಪಿಸಿದ್ದು, 3,100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಜತೆಗೆ, 89,527 ಮಂದಿಯಲ್ಲಿ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ.

ಇರಾನ್‌ನಲ್ಲಿ ಮಂಗಳವಾರ ಮತ್ತೆ 11 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದ ಸಾವಿಗೀಡಾದವರ ಸಂಖ್ಯೆ 77ಕ್ಕೇರಿದೆ.

5000 ಮಂದಿಯಲ್ಲಿ ಸೋಂಕು: ದಕ್ಷಿಣ ಕೊರಿಯಾದಲ್ಲಿ ’ಕೋವಿಡ್‌–19‘ ಸೋಂಕಿಗೆ ಒಳಗಾದವರ ಸಂಖ್ಯೆ 5,000ಕ್ಕೆ ತಲುಪಿದೆ. ಚೀನಾ ಹೊರತುಪಡಿಸಿದರೆ ದಕ್ಷಿಣ ಕೊರಿಯಾದಲ್ಲೇ ಅತಿ ಹೆಚ್ಚು ಮಂದಿ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಮತ್ತೆ ಇಬ್ಬರು ಸಾವಿಗೀಡಾಗಿದ್ದು, ಮೃತಪಟ್ಟವರ ಸಂಖ್ಯೆ 28ಕ್ಕೇರಿದೆ.

ಪೋಪ್‌ಗೆ ಸೋಂಕು ಇಲ್ಲ
ವ್ಯಾಟಿಕನ್‌ ಸಿಟಿ: ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಪೋಪ್‌ ಫ್ರಾನ್ಸಿಸ್‌ ಅವರಲ್ಲಿ ’ಕೋವಿಡ್‌–19‘ ಸೋಂಕು ಇಲ್ಲ ಎಂದು ಇಟಲಿಯ ದಿನಪತ್ರಿಕೆ ವರದಿ ಮಾಡಿದೆ.

ಅನಾರೋಗ್ಯ ಕಾರಣಕ್ಕೆ ಕಳೆದ ವಾರಾಂತ್ಯದಲ್ಲಿ ಪೋಪ್‌ ಅವರು ಎಲ್ಲ ಸಾರ್ವಜನಿಕ ಸಭೆಗಳನ್ನು ರದ್ದುಪಡಿಸಿದ್ದರು.

ಇಟಲಿಯಲ್ಲಿ ಸುಮಾರು 2000 ಮಂದಿ ಸೋಂಕಿಗೆ ಒಳಗಾಗಿದ್ದು, 52 ಮಂದಿ ಸಾವಿಗೀಡಾಗಿದ್ದಾರೆ.

ಮನೆಯಿಂದಲೇ ಕೆಲಸ ಮಾಡಲು ಸೂಚನೆ
ಸ್ಯಾನ್‌ ಫ್ರಾನ್ಸಿಸ್ಕೊ: ಜಗತ್ತಿನಾದ್ಯಂತ ಇರುವ ಟ್ವೀಟರ್‌ ಕಂಪನಿಯ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ಸೋಮವಾರದಿಂದಲೇ ಈ ಸೂಚನೆ ನೀಡಲಾಗಿದೆ. ’ಕೋವಿಡ್‌–19‘ ಹರಡುವುದನ್ನು ನಿಯಂತ್ರಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಟ್ವೀಟರ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜೆನ್ನಿಫರ್‌ ಕ್ರಿಸ್ಟಿ ತಿಳಿಸಿದ್ದಾರೆ.

ದಕ್ಷಿಣ ಕೊರಿಯಾ, ಹಾಂಗ್‌ಕಾಂಗ್‌ ಮತ್ತು ಜಪಾನ್‌ ದೇಶಗಳಲ್ಲಿ ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಅಲ್ಲಿನ ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಸಂಜಾತ ನೇಮಕ
ಭಾರತ ಸಂಜಾತ ಅಮೆರಿಕದ ಆರೋಗ್ಯ ನೀತಿಯ ಸಮಾಲೋಚಕ ಸೀಮಾ ವರ್ಮಾ ಅವರನ್ನು ’ಕೋವಿಡ್‌–19‘ ಕಾರ್ಯ ಪಡೆಯ ಸದಸ್ಯರನ್ನಾಗಿ ನೇಮಿಸಲಾಗಿದೆ. ವೈರಸ್‌ ನಿಯಂತ್ರಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಕಾರ್ಯಪಡೆಯನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.